ಇಂದಿನಿಂದ ಹುಲಿಕಲ್ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ
ಅರಕಲಗೂಡು: ತಾಲೂಕಿನ ಹುಲಿಕಲ್ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಏ.21ರಂದು ನಡೆಯಲಿದ್ದು, ಇದರ ಅಂಗವಾಗಿ ಏ.25ರ ವರೆಗೆ ದೇವಾಲಯದಲ್ಲಿ ನಾನಾ ಪೂಜಾ ಕೈಂಕರ್ಯಗಳು ಜರುಗಲಿವೆ. ಹುಲಿಕಲ್ ಗ್ರಾಮದಲ್ಲಿ ಭಕ್ತಜನ ಸಂರಕ್ಷಣಾರ್ಥವಾಗಿ ಅರ್ಜಾವತಾರದಿಂದ ವಿರಾಜಮಾನರಾಗಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಬಹಳ ಹಿಂದಿನಿಂದಲೂ ಸಹ ಜಯ ಸಂವತ್ಸರದ ಚೈತ್ರ ಬಹುಳ ಸಪ್ತಮಿಯಂದು ಆಚರಣೆಯಾಗುತ್ತಾ ಬಂದಿದ್ದು, ಹತ್ತಾರು ಗ್ರಾಮಗಳ ಸಹಸ್ರಾರು ಭಕ್ತರ ಆರಾಧ್ಯ ದೈವವಾಗಿದೆ.
ಕಾರ್ಯಕ್ರಮದ ಅಂಗವಾಗಿ ಕಳೆದ ಏ.15ರಿಂದಲೂ ನಾನಾ ಪೂಜಾ ಕೈಂಕರ್ಯಗಳು ಸೇವಾರ್ಥದಾರರಿಂದ ನಡೆಯುತ್ತಿವೆ. ಅಲ್ಲದೆ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಏ.21ರಂದು ರಾತ್ರಿ ಶಾಂತ್ಯುತ್ಸವ, ಏ.22ರಂದು ಬೆಳಗ್ಗೆ ವಿದ್ವಾನ್ ಮುಕುಂದ ಅವರಿಂದ ಉಪನ್ಯಾಸ, ಸಂಜೆ ಹರಿಣಿ ಮತ್ತು ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಏ.23ರಂದು ಬೆಳಗ್ಗೆ ಕೃಷ್ಣನ್ ಅವರಿಂದ ಶ್ರೀನಿವಾಸ ಪದ್ಮಾವತಿ ಪ್ರಣಯ ಕಲಹ ಕುರಿತು ಸಂಧಾನ ಪುರಾಣ, ಏ.24ರಂದು ಸಂಜೆ ದ್ವಂದ್ವ ಪಿಟೀಲು ವಾದನ ಕೃತಿಕ್ ಕೌಶಿಕ್ ಮತ್ತು ಪೃಥ್ವಿ ಅವರಿಂದ. ಮೃದಂಗ ಕಿಶನ್ ಕೌಶಿಕ ಹಾಗೂ ಶ್ರೀಪ್ರಿಯಾ ಮತ್ತು ಶ್ರೀರಂಜಿನಿ ಅವರಿಂದ ಹಾಡುಗಾರಿಕೆ. ಪಕ್ಕವಾದ್ಯ-ಪಿಟೀಲು ಕೃತಿಕ್ ಕೌಶಿಕ್, ಮೃದಂಗ ಕಿಶನ್ ಕೌಶಿಕ್ ಅವರಿಂದ ಏರ್ಪಡಿಸಲಾಗಿದೆ.
ಬಾಲಚಂದ್ರ ವರ್ಗಾವಣೆ
ಹಾಸನ: ಹಾಸನದ ಕಾರ್ಪೋರೇಷನ್ ಬ್ಯಾಂಕಿನ ಕಂದಲಿ ಶಾಖೆಯಲ್ಲಿ ಒಂದೂವರೆ ವರ್ಷದಿಂದ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಕೆ. ಬಾಲಚಂದ್ರ ಅವರನ್ನು ಚಿಕ್ಕಮಗಳೂರಿನ ಕಾರ್ಪೋರೇಷನ್ ಬ್ಯಾಂಕ್ನ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಹಾಸನ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಉಚಿತ ತರಬೇತಿ ನೀಡುವ ಹೊಸ ಪರಂಪರೆ ಪ್ರಾರಂಭಿಸಿ ಯಶಸ್ವಿಯಾಗಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಹಾಸನದಲ್ಲಿ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಗಳನ್ನು ಬಿಜಿಎಸ್ ಹಾಗೂ ಉದ್ಯೋಗ ವಿನಿಮಯ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರಗಳೊಂದಿಗೆ ಸಂಯೋಜಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದರು.
ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆ ಕುರಿತಂತೆ ಹಾಗೂ ಸ್ವ ಉದ್ಯೋಗ ಕೈಗೊಳ್ಳಲು ಬೇಕಾಗುವ ಪೂರ್ವ ತಯಾರಿ ಮಾಹಿತಿಗೆ ಸಂಬಂಧಿಸಿದಂತೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕ ಸಂಖ್ಯೆ- 08262-221515, 221616. ಸಂಚಾರಿ ದೂರವಾಣಿ ಸಂಖ್ಯೆ- 9449148705.
ಜನಮನ ಸೆಳೆದ ಚಿಣ್ಣರ ಚಿತ್ರ ರಚನೆ
ಹಾಸನ: ಚಿತ್ಕಲ ಫೌಂಡೇಶನ್ ವತಿಯಿಂದ ಭಾನುವಾರ ವಿಶ್ವಕಲಾ ದಿನಾಚರಣೆ ಪ್ರಯುಕ್ತ ಚಿತ್ಕಲಾ ಹವ್ಯಾಸಿ ಚಿತ್ರಕಲಾ ಶಾಲೆ ಮಕ್ಕಳಿಂದ ಸಾಮೂಹಿಕ ಚಿತ್ರ ರಚನೆ ನಡೆಯಿತು. ನಗರದ ಮಹಾರಾಜ ಉದ್ಯಾನವನದಲ್ಲಿ ನಡೆದ ಮಕ್ಕಳಿಂದ ಸಾಮೂಹಿಕ ಚಿತ್ರ ರಚನೆ ಕಾರ್ಯಕ್ರಮದಲ್ಲಿ ಚಿತ್ಕಲಾ ಹವ್ಯಾಸಿ ಚಿತ್ರಕಲಾ ಶಾಲೆಯ ಸುಮಾರು 20ಕ್ಕೂ ಹೆಚ್ಚು ಮಕ್ಕಳು 30 ಅಡಿ ಉದ್ದದ ಬೋರ್ಡ್ ಮೇಲೆ ಸಾಮೂಹಿಕವಾಗಿ ಪರಿಸರದ ಚಿತ್ರವನ್ನು ರಚಿಸುವ ಮೂಲಕ ಎಲ್ಲರ ಮನ ಸೆಳೆದರು. ಈ ಸಂದರ್ಭದಲ್ಲಿ ಚಿತ್ಕಲ ಫೌಂಡೇಶನ್ ಸಂಸ್ಥಾಪಕ ದೇಸಾಯಿ ಹಾಗೂ ಇತರರು ಇದ್ದರು.