ಡಿಸಿ ಸಾಹೇಬ್ರು ನೀರಿನ ಸಮಸ್ಯೆ ಪರಿಹರಿಸ್ತಾರಾ?
ಬೇಲೂರು: ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದನೆ ವ್ಯಕ್ತಪಡಿಸಿದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಬಂದಿದ್ದು, ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಮೂಲ ಸಮಸ್ಯೆ ಬಗೆಹರಿಸುತ್ತಾರೆ ಎಂದು ಗ್ರಾಮದ ಜನರು ಕಾಯುತ್ತಿದ್ದಾರೆ.
ತಾಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಹನಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ಮೂಲ ಸೌಲಭ್ಯ ಎಂಬುದು ಮರೀಚಿಕೆಯಾಗಿದೆ. ಇಲ್ಲಿನ ಹನಿಕೆ ಗ್ರಾಮ ಪಂಚಾಯ್ತಿ ಶೆಟ್ಟಿಹಳ್ಳಿ ಗ್ರಾಮಕ್ಕೆ ಮೂಲ ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ನೀರಿನ ಸಮಸ್ಯೆ ಒಂದೆಡೆಯಾದರೆ ರಸ್ತೆ, ಚರಂಡಿ, ಶೌಚಾಯಲವಿಲ್ಲದೆ ಜನರು ಪರಿತಪಿಸುವಂತಾಗಿದೆ. ಹಲವಾರು ಸಮಸ್ಯೆಗಳಿದ್ದರೂ ಹನಿಕೆ ಗ್ರಾಮ ಪಂಚಾಯ್ತಿ ಆಡಳಿತ ಮತ್ತು ಸಂಬಂಧ ಅಧಿಕಾರಿಗಳು ಗ್ರಾಮೀಣರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಅಧಿಕಾರಿಗಳ ಉದ್ಧಟತನ ಎಂದು ಗ್ರಾಮಸ್ಥರು ದೂರುತ್ತಾರೆ.
ಹೆಬ್ಬಾಳು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯರು ಅನುಕಂಪದ ಮೇಲೆ ಓಟು ಗಿಟ್ಟಿಸಿಕೊಂಡು ಗೆದ್ದ ನಂತರ ಜನರ ಸಮಸ್ಯೆಗಳನ್ನು ಆಲಿಸಲು ಕ್ಷೇತ್ರದತ್ತ ತಲೆಹಾಕಿ ಮಲಗದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗ್ರಾಪಂ ವಿಫಲ: ತಾಲೂಕು ಪಂಚಾಯ್ತಿ ಸದಸ್ಯರು ಸಹ ಗ್ರಾಮಕ್ಕೆ ಸಮುದಾಯಭವನ ಬಿಟ್ಟರೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದು, ಈ ಬಗ್ಗೆ ಮತನಾಡಿರುವ ತಾಪಂ ಸದಸ್ಯರು, ತಾಲೂಕು ಪಂಚಾಯಿತಿಯಲ್ಲಿ ಬರುವ ಅನುದಾನ ಕಡಿಮೆಯಗಿದೆ. ಬಂದ ಅನುದಾನದಲ್ಲಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ಶಾಸಕರು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ. ಶಾಸಕ ವೈ.ಎನ್. ರುದ್ರೇಶಗೌಡ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿಲ್ಲ, ನನಗೆ ಓಟು ನೀಡಿದ ಜಾವಗಲ್ಗೆ ಅನುದಾನ ನೀಡಬೇಕು ಎಂದು ಹೇಳುತ್ತಾರೆ ಎಂದು ಶೆಟ್ಟಿಹಳ್ಳಿ ಗ್ರಾಮಸ್ಥರು. ಈ ಎಲ್ಲ ಕಾರಣದಿಂದ ಮತದಾನವನ್ನು ಬಹಿಷ್ಕಾರ ಮಾಡಿದ್ದು, ಅದರೆ ಜಿಲ್ಲಾಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಓಟು ಮಾಡಿದ್ದೇವೆ. ಅದರೆ ನಮಗೆ ನಿತ್ಯ ದೂರದ ಕೆರೆಯಿಂದ ನೀರು ತಂದು ಬಳಕೆ ಮಾಡಿಕೊಳ್ಳಲಾಗುತ್ತದೆ. ಕುಡಿಯುವ ನೀರಿಗೆ ಕೊಳವೆ ಬಾವಿಯಲ್ಲಿ ನೀರು ಇಲ್ಲ, ಪಕ್ಕದಲ್ಲಿ ಯಗಚಿ ಜಲಾಶಯ ನೀರು ನೀಡುವಲ್ಲಿ ಮಾತ್ರ ಆಡಳಿತ ನಡೆಸುವವರು ಗಮನಹರಿಸಿಲ್ಲ. ಜಿಲ್ಲಾಧಿಕಾರಿಗಳು ಶೀಘ್ರ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂಬ ಅಶಾಭಾವನೆಯನ್ನು ಗ್ರಾಮಸ್ಥರು ಹೊಂದಿದ್ದಾರೆ.