ಪೆಟ್ರೋಲ್ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ
ಆಲೂರು: ತಾಲೂಕಿನ ಆನಗಳಲೆ ಗ್ರಾಮದಲ್ಲಿ ಒಂಟಿ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿ ಇದ್ದವರನ್ನು ಕಟ್ಟಿಹಾಕಿ ಚಿನ್ನಾಭರಣ ಸೇರಿ ಹಣ ದರೋಡೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಪುಟ್ಟನಾಗಪ್ಪ ಎಂಬುವರ ಮನೆಗೆ ನುಗ್ಗಿದ ಐವರು ದರೋಡೆಕೋರರು ಪೆಟ್ರೋಲ್ ಕೇಳುವ ನೆಪದಲ್ಲಿ ಮನೆಯ ಬಾಗಿಲು ತೆರೆಸಿ ಏಕಾಏಕಿ ಮನೆಯಲ್ಲಿ ಇದ್ದ ಪುಟ್ಟನಾಗಪ್ಪ, ಅಳಿಯ ಮಹೇಶ್ ಹಾಗೂ ಅವರ ಪತ್ನಿ ಕೈಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣ ಹಾಗೂ 1 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಗಳು ಹೆಚ್ಚಳ: ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ, ಡಿವೈಎಸ್ಪಿ ಕುಮಾರಸ್ವಾಮಿ, ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕಿನಾದ್ಯಂತ ಹಗಲು ಕಳ್ಳತನ, ರಾತ್ರಿ ವೇಳೆಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಈ ವರೆಗೂ ಹಲವಾರು ಪ್ರಕರಣಗಳನ್ನು ಭೇದಿಸಲು ಪೊಲೀಸರು ವಿಫಲರಾಗಿದ್ದು, ತಾಲೂಕಿನ ಜನತೆಯ ನಿದ್ದೆಗೆಡಿಸಿದೆ. ಆತಂಕಕ್ಕೆ ಒಳಗಾಗಿರುವ ಜನರ ಭಯ ನಿವಾರಣೆಯಾಗಬೇಕಾದರೆ ಪೊಲೀಸರು ಇಂತಹ ಪ್ರಕರಣಗಳನ್ನು ಭೇದಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು ಹಾಗೂ ಮಗ್ಗೆ ಗ್ರಾಮದಲ್ಲಿ ಶೀಘ್ರವಾಗಿ ಪೊಲೀಸ್ ಹೊರ ಠಾಣೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ದರೋಡೆ, ಗಲಾಟೆಗಳು ನಡೆದಾಗ ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿ ಇರುವ ಈ ಭಾಗಕ್ಕೆ ಪೊಲೀಸರು ಬರಲು ತಡವಾಗುತ್ತಿದೆ. ಅಲ್ಲದೆ ಪಟ್ಟಣದ ಪೊಲೀಸ್ ಠಾಣೆ ಉದ್ಘಾಟನೆಗೆ ಬಂದಿದ್ದ ಗೃಹ ಸಚಿವರಾಗಿದ್ದ ದಿವಂಗತ ವಿ.ಎಸ್. ಆಚಾರ್ಯ ಅವರು ಈ ಭಾಗದ ಜನರ ಸಮಸ್ಯೆಯನ್ನು ಆಲಿಸಿ ಮಗ್ಗೆಯಲ್ಲಿ ಶೀಘ್ರ ಹೊರ ಠಾಣೆ ತೆರೆಯುವುದಾಗಿ ಭರವಸೆ ನೀಡಿದ್ದರು. ಇದಾಗಿ ಹಲವು ವರ್ಷಗಳು ಕಳೆದರೂ ಹಲವಾರು ಮಂದಿ ಸಚಿವರಾಗಿದ್ದರು ಸಹ ಇಲ್ಲಿ ಹೊರ ಠಾಣೆಯನ್ನು ತೆರೆಯಲು ಆಗಿಲ್ಲ. ಇಂತಹ ಪ್ರಕರಣಗಳು ಮರುಕಳಿಸದೇ ಇರಬೇಕಾದರೆ ಶೀಘ್ರ ಪೊಲೀಸ್ ಹೊರ ಠಾಣೆಯನ್ನು ತೆರೆಯಬೇಕು ಎಂದರು.