ಪ್ರತ್ಯೇಕ ಪ್ರಕರಣ: ನಾಲ್ವರ ಸಾವು
ಹಾಸನ: ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ಪ್ರಕರಣದಲ್ಲಿ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೇಲೂರು ತಾಲೂಕಿನ ಹಳೇಬೀಡು ಹೋಬಳಿ, ಕೊಮಾರನಹಳ್ಳಿ ಗ್ರಾಮದ ವಾಸಿ ರಾಜಕುಮಾರ್ (35) ಅವರ ಟ್ರ್ಯಾಕ್ಟರ್ನಲ್ಲಿ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಕೃಷಿ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ತೆರಳಲು ವಡ್ಡರಹಳ್ಳಿ-ಕೊಮಾರನಹಳ್ಳಿ ಮಧ್ಯ ಸರ್ಕಾರಿ ಗೋಮಾಳದ ಹತ್ತಿರ ಟ್ರ್ಯಾಕ್ಟರ್ನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ತೀವ್ರ ಗಾಯವಾಗಿದ್ದು, ರಾಜಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ತಂದೆ ಶಿವನಂಜಪ್ಪ ಅವರು ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ಸಾವು: ಮತ್ತೊಂದು ಪ್ರಕರಣದಲ್ಲಿ ಬೇಲೂರು ತಾಲೂಕಿನ ಪ್ರಸಾದಿಹಳ್ಳಿ ಗ್ರಾಮದ ರಮೇಶ್ ಎಂಬುವರು ಬೇಲೂರಿನಿಂದ ತಮ್ಮ ಗ್ರಾಮಕ್ಕೆ ಬರುವಾಗ ಪ್ರಸಾದಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗದ ರಸ್ತೆಯಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಮೇಶ ಕೆಳಕ್ಕೆ ಬಿದ್ದು ಗಾಯವಾಗಿದ್ದರಿಂದ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ತಮ್ಮ ಸೋಮೇಗೌಡ ಅವರು ಬೇಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟೆಂಪೋ ಟ್ರಾವೆಲ್ಲರ್ ಡಿಕ್ಕಿ: ಇನ್ನೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿ ಎಂ.ಕೆ. ಹೊಸೂರು ಗ್ರಾಮದ ಟಿ.ಎಸ್. ನಂಜೇಗೌಡ (54) ಅವರು ಹಿರಿಸಾವೆಯ ಪ್ರಜ್ವಲ್ ಡಾಬಾದ ಎದುರು ಎನ್ಎಚ್-75 ಬಿಎಂ ರಸ್ತೆ ದಾಟುತ್ತಿದ್ದಾಗ ಟೆಂಪೋ ಟ್ರಾವೆಲ್ಲರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯವಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನಾಗೇಶ ಅವರು ಹಿರಿಸಾವೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಜಗದೀಶ ಬೈಕಿನಲ್ಲಿ ಹೊಳೆನರಸೀಪುರ-ಅರಕಲಗೂಡು ರಸ್ತೆಯ ಮುಂಡನಹಳ್ಳಿ ಕ್ರಾಸ್ ಹತ್ತಿರ ಹೋಗುತ್ತಿದ್ದು, ಅವರ ಮುಂದೆ ತಮ್ಮ ಭಾವ ಈರಾಜಿ (30) ಅವರು ಪತ್ನಿ ಸಾವಿತ್ರಮ್ಮ ಅವರನ್ನು ಟಿವಿಎಸ್ ಎಕ್ಸೆಲ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಅರಕಲಗೂಡು ಕಡೆಯಿಂದ ಬಂದ ಬೊಲೆರೋ ಡಿಕ್ಕಿ ಮಾಡಿದ ಪರಿಣಾಮ ಈರಾಜಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಂಬಂಧಿ ಜಗದೀಶ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಜೂಜಾಡುತ್ತಿದ್ದವನ ಬಂಧನ
ಹಾಸನ: ಮಟ್ಕಾ ಜೂಜಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಶನಿವಾರ ನಡೆದಿದೆ. ಹಾಸನದ ಕಟ್ಟಿನಕೆರೆ ಮಾರ್ಕೆಟ್ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ ಮಟ್ಕಾ ಜೂಜಾಟಾಡುತ್ತಿದ್ದಾಗ ನಗರ ಠಾಣೆಯ ಪಿ ಎಸ್ಐ ಕೆ.ಕೆ. ಶ್ರೀಧರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ-ಜೂಜಾಡುತ್ತಿ ಅಲ್ತಾಫ್ ಹುಸೇನ್ (57)ನ್ನು ಬಂಧಿಸಿದ್ದು, ಮಟ್ಕಾ-ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 400 ನಗದನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯ ಮಾರಿದವರ ಸೆರೆ
ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರು ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಗಂಡಸಿ ಠಾಣೆಯ ಪಿಎಸ್ಐ ಮೋಹಿತ್ ಸಹದೇವ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಾಸು (24), ಹೊನ್ನೇಗೌಡ (24) ಎಂಬವರನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ ಸುಮಾರು 566 ಬೆಲೆಯ 180 ಎಂಎಲ್ನ 10 ಓಲ್ಡ್ ತವರೀನ್ ವಿಸ್ಕಿ ಪಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
750 ಬೆಲೆಯ ಅಕ್ರಮ ಮದ್ಯ ವಶ: ಮತ್ತೊಂದು ಪ್ರಕರಣದಲ್ಲಿ ಚುನಾವಣೆ ಪ್ರಯುಕ್ತ ಎಂಸಿಸಿ ಅಧಿಕಾರಿಯಾಗಿ ನೇಮಕವಾಗಿದ್ದ ಕೆಂಪಚೌಡಪ್ಪ ಬಾಣಾವರ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಾಣಾವರದ ಮೆನನ್ ಕ್ಲಾತ್ ಸೆಂಟರ್ನ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗಂಗಾಧರ ನಾಯ್ಕ (56) ಎಂಬವರನ್ನು ಬಂಧಿಸಲಾಗಿದೆ. ಸುಮಾರು 750 ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಶೆಟ್ಟಿಹಳ್ಳಿಯಲ್ಲಿ ಕುಡಿವ ನೀರು ಸಮಸ್ಯೆ ನೀಗಿಸಿ
ಬೇಲೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಪ್ರಮುಖವಾಗಿದೆ. ತಾಲೂಕು ಕೇಂದ್ರದಿಂದ ಸುಮಾರು 12 ಕಿ.ಮೀ. ದೂರದಲ್ಲಿ ಇರುವ ಗ್ರಾಮ ಕಸಬಾ ಹೋಬಳಿಗೆ ಸೇರಿದ್ದು, ಹನಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೆ ಹೆಬ್ಬಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೂ ಮತ್ತು ರಾಜನಸಿರಿಯೂರು ತಾಪಂ ವ್ಯಾಪ್ತಿಗೆ ಒಳಪಡುತ್ತದೆ.
ಇಂತಹ ಗ್ರಾಮಕ್ಕೆ ಮೂಲ ಸೌಲಭ್ಯ ಎಂಬುದು ಮರೀಚಿಕೆಯಾಗಿದ್ದು, ಹನಿಕೆ ಗ್ರಾಮ ಪಂಚಾಯಿತಿ ಶೆಟ್ಟಿಹಳ್ಳಿ ಗ್ರಾಮಕ್ಕೆ ಮೂಲ ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆ. ಹದೆಗೆಟ್ಟ ಗ್ರಾಮ ಒಳ ರಸ್ತೆ, ಕಸದಿಂದ ತುಂಬಿದ ಚರಂಡಿ, ಗ್ರಾಮದಲ್ಲಿ ಶೌಚಾಲಯವಿಲ್ಲ ಹೀಗೆ ಹಲವು ಹತ್ತು ಸಮಸ್ಯೆಗಳ ಸರ ಮಾಲೆ ಇದ್ದರೂ ಹನಿಕೆ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಂಬಂಧ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರ ನಮ್ಮ ಸಮಸ್ಯೆಗೆ ಪರಿಹಾರ ನೀಡಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಬಸವರಾಜು, ನಿಂಗಪ್ಪ, ಶೆಟ್ಟಿಹಳ್ಳಿ