'ಪ್ರಾಕೃತ ಭಾಷೆಯಲ್ಲಿ ಹುದುಗಿರುವ ಜೈನ ಧರ್ಮ'
ಚನ್ನರಾಯಪಟ್ಟಣ: ಭಗವಾನ್ ಮಹಾವೀರರು ಪ್ರಾಕೃತ ಭಾಷೆಯಲ್ಲಿ ತಮ್ಮ ಸಾಹಿತ್ಯಕ ಕೊಡುಗೆ ನೀಡಿದ್ದು, ಅದನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶ್ರವಣಬೆಳಗೊಳದ ಚಾರುಕೂರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶ್ರವಣಬೆಳಗೊಳದಲ್ಲಿ ಮಹಾವೀರ ಜಯಂತಿ ಅಂಗವಾಗಿ ಭಗವಾನ್ ಮಹಾವೀರ ತೀರ್ಥಂಕರ ಮತ್ತು ಪ್ರಾಕೃತ ಸಾಹಿತ್ಯ ಕುರಿತ ವಿಚಾರಗೋಷ್ಠಿಯಲ್ಲಿ ಆಶೀರ್ವಚನ ನೀಡಿ, ಮಹಾವೀರರು ತೀರ್ಥಂಕರರಾಗಿ ಸಮಾಜಕ್ಕೆ ಜೈನ ಸಮುದಾಯದ ನೀತಿಯನ್ನು ಬೋಧಿಸದೆ ಅವರು ಸಾಹಿತ್ಯವನ್ನು ರಚಿಸಿರುವುದರಿಂದ ಪ್ರಾಕೃತ ಭಾಷೆಯಲ್ಲಿ ದೊರೆಯುತ್ತಿದೆ ಎಂದು ತಿಳಿಸಿದರು.
ಬೌದ್ಧ ಧರ್ಮ ಪಾಲಿ ಭಾಷೆಯಲ್ಲಿ ಸುರಕ್ಷಿತವಾಗಿರುವಂತೆ, ಜೈನ ಧರ್ಮ ಪ್ರಾಕೃತ ಭಾಷೆಯಲ್ಲಿ ಹುದುಗಿದ್ದು, ಅಶೋಕನು ತನ್ನ ಶಾಸನಗಳನ್ನು ಪ್ರಾಕೃತ ಭಾಷೆಯಲ್ಲಿ ಬರೆಸಿರುವುದರಿಂದ ಅಂದಿನ ಇತಿಹಾಸಗಳು ಇಂದು ನಮಗೆ ದೊರೆಯುತ್ತಿವೆ ಎಂದು ತಿಳಿಸಿದರು.
ಇಂದು ಮಾತೃಭಾಷಾ ಶಿಕ್ಷಣ ಮಾಯವಾಗುತ್ತಿರುವುದರಿಂದ ಮಾತೃಭಾಷಾ ಶಿಕ್ಷಣ ಮರೆಯುವ ಅಂಚಿಗೆ ಹೋಗದಂತೆ ನಾವು ಕಾಯ್ದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಮೈಸೂರು ವಿವಿ ಪ್ರಾಕೃತ ವಿಭಾಗದ ಮುಖ್ಯಸ್ಥೆ ಡಾ. ಪದ್ಮರಾಜಶೇಖರ್ ಮಾತನಾಡಿ, ಮಹಾವೀರರ ಸಾಹಿತ್ಯವನ್ನು ಎಲ್ಲಾ ಭಾಷೆಗೆ ಅನುವಾದಿಸಿ ಅದರಲ್ಲಿನ ಸಾರವನ್ನು ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ಚಾವುಂಡರಾಯ ಪ್ರಶಸ್ತಿ ಪುರಸ್ಕೃತ ಸರಸ್ವಿತಿ ವಿಜಯ್ಕುಮಾರ್, ಹಾಗೂ ಆಚಾರ್ಯ ನೇಮಿಚಂದ್ರ ಪ್ರಶಸ್ತಿ ಪುರಸ್ಕೃತ ರಮೇಶ್ ಚಂದ್ ಜೈನ್ ಅವರನ್ನು ಸನ್ಮಾನಿಸಲಾಯಿತು.