ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸೂಚನೆ

Srinivasa Murthy VN
Updated On : 20 Apr 2014, 8:31 am

ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಬಿ.ಎ/ಬಿ.ಕಾಂಗೆ ಪ್ರವೇಶಾತಿ ಪಡೆದು ಪರೀಕ್ಷಾ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಏ.23ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. ಪರೀಕ್ಷೆಯ ಪ್ರವೇಶಾತಿ ಪತ್ರವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಪಡೆಯಲು ಸೂಚಿಸಲಾಗಿದೆ ಎಂದು ರಾಜ್ಯ ಮುಕ್ತ ವಿವಿ ಪ್ರಾದೇಶಿಕ ನಿರ್ದೇಶ ಡಾ. ಪಿ. ಹರೀಶ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಸನ ಪ್ರಾದೇಶಿಕ ಕೇಂದ್ರ ಆದಿಚುಂಚನಗಿರಿ ಕಲ್ಯಾಣ ಮಂಟಪ ಕಟ್ಟಡ, ಎಂ.ಜಿ. ರೋಡ್, ರವೀಂದ್ರ ನಗರ, ಹಾಸನ -573 201ಇಲ್ಲಿ ಅಥವಾ ದೂ- 08172 269244 ಸಂಪರ್ಕಿಸಬಹುದು. ಹಾಸನ ನಗರದಲ್ಲಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಬಿ.ಎ ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರಿ ಕಲಾ ಕಾಲೇಜು, ಹಾಸನ ಹಾಗೂ ಎಲ್ಲಾ ಬಿ.ಎ ಪುರುಷ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಎಲ್ಲಾ ಬಿ.ಕಾಂ ಮಹಿಳಾ/ಪುರುಷ ವಿದ್ಯಾರ್ಥಿಗಳಿಗೆ ಬಿ.ಈ.ಜಿ ಕಾಲೇಜು, ಬಿ.ಎಂ ರಸ್ತೆ, ಹಾಸನ ಇಲ್ಲಿ ಪರೀಕ್ಷೆ ಬರೆಯಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08172-269244 ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಮಾರ್ಗದಮ್ಮ ದೇವಿ ಜಾತ್ರೆ ಇಂದಿನಿಂದ
ಜಾವಗಲ್: ಹೋಬಳಿಯ ಮಲದೇವಿಹಳ್ಳಿ ಗ್ರಾಮದೇವತೆ ಮಾರ್ಗದಮ್ಮ ದೇವಿ ಜಾತ್ರಾ ಮಹೋತ್ಸವವು ಏ.21ರಿಂದ ಏ.23ರ ವರೆಗೆ ನಡೆಯಲಿದೆ.
ಸೋಮವಾರ ಅಮ್ಮನವರ ಮೂಲಪ್ರತಿಮೆಗೆ ಅಭಿಷೇಕ, ಬೆಣ್ಣೆ ಅಲಂಕಾರ, ಸಂಜೆ ಧ್ವಜಾರೋಹಣ, ರಾತ್ರಿ 8 ಗಂಟೆಗೆ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿಯವರ ಕೆಂಡೋತ್ಸವ ನಡೆಯಲಿದೆ.  ಮಂಗಳವಾರ ಹೂವಿನ ಅಲಂಕಾರ, ಸಂಜೆ 7ಕ್ಕೆ ಗಂಗಾಪೂಜೆ, ಕಳಸ ಸ್ವಾಪನೆ, ಮದುವಣಿಗೆ ಶಾಸ್ತ್ರ, ಬೇವಿನಸೀರೆ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಬುಧವಾರ ಬೆಳಗ್ಗೆ ಅಮ್ಮನವರಿಂದ ಗ್ರಾಮದ ದಿಗ್ಬಂಧನೆ, ಮಧ್ಯಾಹ್ನ 3ಕ್ಕೆ  ರಥೋತ್ಸವವು ನಡೆಯಲಿದೆ. ಹೋಬಳಿಯ ಧನಂಜಯಪುರ-ಕೆರೆಕೊಡಿಹಳ್ಳಿ ಗ್ರಾಮದೇವತೆ ಕರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವವು ಏ.22ರಿಂದ ಏ.25ರ ವರೆಗೆ ನಡೆಯಲಿದೆ. ಮಂಗಳವಾರ ರಾತ್ರಿ ಬೇವಿನಸೀರೆಸೇವೆ, ಬಾನ, ಗುರುವಾರ ರಾತ್ರಿ ಆರತಿ ಪೂಜೆ ಗಂಗಾಸ್ನಾನ, ಶುಕ್ರವಾರ ರಥೋತ್ಸವವು ನಡೆಯಲಿದೆ.  ಶ್ರೀ ಶನೇಶ್ಚರ ಕಲಾಸಂಘದ ಬಾಲಕರಿಂದ ಶ್ರೀ ರಾಜಾಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಏರ್ಪಡಿಸಲಾಗಿದೆ.

'ಕ್ಷೀಣಿಸುತ್ತಿರುವ ಸೇವಾ ಮನೋಭಾವ'
ಹಾಸನ: ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಜನರಲ್ಲಿ ಸೇವಾ ಮನೋಭಾವ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಶಿಬಿರಗಳ ಅವಶ್ಯಕತೆ ತುಂಬಾ ಮುಖ್ಯವಾದದ್ದು ಎಂದು ಸಿಂಗಟಗೆರೆ ಗ್ರಾಮದ ಮುಖಂಡ ರಂಗೇಗೌಡ ತಿಳಿಸಿದ್ದಾರೆ. ಹಾಸನ ತಾಲೂಕು ಕಸಬಾ ಹೋಬಳಿ ಸಿಂಗಟಕೆರೆ ಗ್ರಾಮದ ವಿದ್ಯಾನಗರದಲ್ಲಿರುವ ನೇತಾಜಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಕೂಡ ವಿರಳವಾಗಿದೆ. ಹಾಗಾಗಿ ಈ ಶಿಬಿರವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಗ್ರಾಪಂ ಸದಸ್ಯ ವೆಂಕಟರಾಮು ಮಾತನಾಡಿ, ಶಿಬಿರದಲ್ಲಿ ಅತ್ಯುತ್ತಮ ವಿಷಯಗಳ ಮಂಡನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಚರ್ಚಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಮುಖಂಡ ಅಪ್ಪಾಜಿಗೌಡ ಹಾಗೂ ಪ್ರಾಂಶುಪಾಲ ಹರೀಶ್ ಶಿಬಿರಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ  ಎನ್ಎಸ್ಎಸ್ ಅಧಿಕಾರಿ ವಸಂತಕುಮಾರ್ ಪ್ರಾಸ್ತಾವಿಕ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement