ಲೋಕ ಅದಾಲತ್ನಲ್ಲಿ 363 ಪ್ರಕರಣ ಇತ್ಯರ್ಥ: ನ್ಯಾ. ಕಂಬೇಗೌಡ
ಹೊಳೆನರಸೀಪುರ: ಇಲ್ಲಿನ ನ್ಯಾಯಾಲಯದಲ್ಲಿ 2014ರ ಜ.6ರಿಂದ ಏ.12ರ ವರೆಗೆ ನಡೆಸಲಾದ ಮೆಗಾ ಲೋಕ ಅದಾಲತ್ನಲ್ಲಿ ಒಟ್ಟು 363 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1.26 ಕೋಟಿಗಳಷ್ಟು ಪರಿಹಾರ ಧನವನ್ನು ನೀಡಲು ಆದೇಶಿಸಲಾಗಿದೆ ಎಂದು ಜೆಎಂಎಫ್ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ. ಕಂಬೇಗೌಡ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಅವರು, ಮೋಟಾರು ವಾಹನ ಕಾಯ್ದೆಯಡಿಯ ಪ್ರಕರಣಗಳು, ಭೂ ಸ್ವಾಧೀನದಡಿಯ ಪ್ರಕರಣಗಳಿಗೆ ನೀಡಬೇಕಾದ ಅಮಲ್ದಾರಿ ಪ್ರಕರಣಗಳು, ವೈವಾಹಿಕ ಪ್ರಕರಣಗಳೂ ಸೇರಿದಂತೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ 198 ಹಾಗೂ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ 165 ಪ್ರಕರಣಗಳು ಸೇರಿದಂತೆ ಒಟ್ಟು 363ಪ್ರಕರಣಗಳನ್ನು ಮೆಗಾ ಲೋಕ ಅದಾಲತ್ನಡಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು. ಈ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಇವುಗಳಡಿ ಅರ್ಜಿದಾರರಿಗೆ ಸಿಗಬೇಕಾದ ಸುಮಾರು 1.26 ಕೋಟಿ ಪರಿಹಾರವನ್ನು ಇತ್ಯರ್ಥಗೊಳಿಸಿ ನೀಡುವಂತೆ ಆದೇಶಿಸಲಾಗಿದೆ. ಇದೇ ರೀತಿಯಲ್ಲಿ ಅರಕಲಗೂಡು ಹಿರಿಯ ನ್ಯಾಯಾಲಯದಲ್ಲಿಯೂ ಒಟ್ಟು 54 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಸುಮಾರು 20 ಲಕ್ಷದಷ್ಟು ಪರಿಹಾರ ವಿತರಣೆಗೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ರೀತಿ ಈ ಹಿಂದೆ ನಡೆದ ಲೋಕ ಅದಾಲತ್ನಲ್ಲಿಯೂ ವಿವಿಧ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ ಸುಮಾರು 1 ಕೋಟಿ ಪರಿಹಾರವನ್ನು ಆದೇಶಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಾದೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ರವೀಶ್ ಇದ್ದರು.