ಬಸ್ ಸೌಲಭ್ಯ ಕಲ್ಪಿಸದಿದ್ದರೆ ರಸ್ತೆತಡೆ: ಎಚ್ಚರಿಕೆ
ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಸುತ್ತ-ಮುತ್ತಲ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಬೇಲೂರುಗೆ ತೆರಳಲು ಸಾರಿಗೆ ಬಸ್‌ಗಳ ಅವ್ಯವಸ್ಥೆಯಿಂದ ಭಾರೀ ಪ್ರಮಾಣದಲ್ಲಿ ತೊಂದರೆಯಾಗಿದೆ. ಸಂಬಂಧಪಟ್ಟ ಅದಿಕಾರಿಗಳಿ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಹೆಬ್ಬಾಳು ಗ್ರಾಮದ ಬೇಲೂರು ಹಳೇಬೀಡು ಹೆದ್ದಾರಿ ಬಳಿ ರಸ್ತೆ ತಡೆ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ. ಹೆಬ್ಬಾಳು ಗ್ರಾಮ ಸೇರಿದಂತೆ ಸುತ್ತಲ ಗ್ರಾಮಗಳಾದ ತಿಮ್ಮನಹಳ್ಳಿ,ದೊಡ್ಡಬ್ಯಾಡಿಗೆರೆ, ಜೋಗಿಹಳ್ಳಿ ,ಶಿವಲ್ದಾಹಳ್ಳಿ, ಕಲ್ಲಹಳ್ಳಿ, ಹುಣಸೇಕೆರೆ ಇನ್ನು ಮುಂತಾದ ಗ್ರಾಮಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇಲೂರು ಹಾಸನ ಚಿಕ್ಕಮಗಳೂರು ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ತೊಂದರೆ: ಆದರೆ ಬಾಣವಾರದಿಂದ ಬರುವ ಬಹುತೇಕ ಸಾರಿಗೆ ಬಸ್‌ಗಳು ಹೆಬ್ಬಾಳಿನಲ್ಲಿ ನಿಲುಗಡೆ ಮಾಡದೆ ಬೇಲೂರಿಗೆ ತೆರಳುತ್ತಿವೆ. ಈ ಕಾರಣದಿಂದ ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಈ ದಿಸೆಯಲ್ಲಿ ಹೆಬ್ಬಾಳುನಲ್ಲಿ ಬಹುತೇಕ ನೂರಕ್ಕೂ ವಿದ್ಯಾರ್ಥಿಗಳು ಇರುವ ಕಾರಣದಿಂದ ಬೇಲೂರು ಹೆಬ್ಬಾಳಿಗೆ ಪ್ರತೇಕ ಸಾರಿಗೆ ಬಸ್ ಬಿಬೇಕು, ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಏಕೀಕರಣ ಹೋರಾಟಗಾರ ಇಬ್ರಾಹಿಂ ಸಾಹೇಬ್ ನಿಧನ
ಬಳ್ಳಾರಿ: ಕರ್ನಾಟಕ ಏಕೀಕರಣ ಹೋರಾಟಗಾರ ಹಿರೇಹಾಳ್ ಇಬ್ರಾಹಿಂ ಸಾಹೇಬ್ (83) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು. ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟದಲ್ಲಿ ಇಬ್ರಾಹಿಂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕು ಡಿ. ಹಿರೇಹಾಳ್ ಗ್ರಾಮದಲ್ಲಿ ಆ. 2ರಂದು ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.
ಸಂಭಾಜಿ, ಅರವಿಂದ ಪಾಟೀಲ ವಿರುದ್ಧ ಕ್ರಮ-ಐಜಿಪಿ
ಬೆಳಗಾವಿ: ಯಳ್ಳೂರಿನ ಘಟನೆ ಸಂಬಂಧ ಪ್ರಚೋದನೆಕಾರಿ ಭಾಷಣ ಮಾಡಿದ್ದಾರೆ ಎನ್ನಲಾದ ಶಾಸಕರಾದ ಸಂಭಾಜಿ ಪಾಟೀಲ, ಅರವಿಂದ ಪಾಟೀಲ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಬೇರೆ ಊರುಗಳಿಂದ ಇಲ್ಲಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕದಡಲು ಬೇರೆ ಊರುಗಳಿಂದ ಇಲ್ಲಿಗೆ ಬರಬೇಡಿ ಎಂದು ಕನ್ನಡ ಮತ್ತು ಮರಾಠಿ ನಾಯಕರಿಗೆ ಸೂಚಿಸಲಾಗಿದೆ ಎಂದರು.
'ಎಸ್‌ಬಿಎಚ್- ಎಸ್‌ಬಿಐ ವಿಲೀನ ಊಹಾಪೋಹ'
ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್‌ನ್ನು ಎಸ್‌ಬಿಐನೊಂದಿಗೆ ವಿಲೀನ ಮಾಡುವುದು ಕೇವಲ ಊಹಾಪೋಹ ಎಂದು ಎಸ್‌ಬಿಎಚ್ ಕಾರ್ಯನಿರ್ವಾಹಕ ನಿರ್ದೇಶಕ ಶಂತನು ಮುಖರ್ಜಿ ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಗೆ ಬಂದ ದಿನದಿಂದಲೂ ಈ ಕುರಿತು ಪ್ರಶ್ನೆಗಳನ್ನು ಮಾಧ್ಯಮದವರು ಕೇಳುತ್ತಿದ್ದಾರೆ. ಆದರೆ ಸರ್ಕಾರದ ಮಟ್ಟದಲ್ಲಿ ಇವತ್ತಿನವರೆಗೆ ಈ ಬಗ್ಗೆ ಚರ್ಚೆ ನಡೆದಿರುವುದು ನನಗೆ ಗೊತ್ತಿಲ್ಲ. ಪ್ರಾದೇಶಿಕ ಬ್ಯಾಂಕ್ ಆಗಿ ಎಸ್‌ಬಿಎಚ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಲಾಭವನ್ನೂ ಗಳಿಸುತ್ತಿದೆ ಎಂದು ನಗರದಲ್ಲಿ ಶುಕ್ರವಾರ ಆರಂಭವಾದ ನೂತನ ಪ್ರಾದೇಶಿಕ ಕಚೇರಿಗೆ ಚಾಲನೆ ನೀಡಿ ಅಭಿಪ್ರಾಯಪಟ್ಟರು. ಬ್ಯಾಂಕ್‌ನ ಒಟ್ಟು ವ್ಯವಹಾರ ಜೂನ್ 2014ರ ವೇಳೆಗೆ 2.20 ಲಕ್ಷ ಕೋಟಿಗೆ ಏರಿದೆ. ಇದರಲ್ಲಿ ಠೇವಣಿ 1.22 ಲಕ್ಷ ಕೋಟಿ ಹಾಗೂ ಸಾಲ 98,662 ಕೋಟಿಯಷ್ಟಿದೆ. ಠೇವಣಿ ಪ್ರಮಾಣವನ್ನು ಇನ್ನೂ 17,900 ಕೋಟಿ ವೃದ್ಧಿಸುವ ಗುರಿ ಹೊಂದಿದ್ದೇವೆ. ಈ ಸಾಲಿನಲ್ಲಿ 235 ಕೋಟಿ ಲಾಭ ಗಳಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ 180 ಶಾಖೆಗಳನ್ನು ಹೊಂದಿರುವ ಬ್ಯಾಂಕ್ 8841 ಕೋಟಿ ವ್ಯವಹಾರ ಹೊಂದಿದೆ. ಬೆಂಗಳೂರಿನ ಆರ್ಥಿಕ ಅಭಿವೃದ್ಧಿ ಲಾಭ ಪಡೆಯುವ ಸಲುವಾಗಿ ವಿಶೇಷ ಪ್ರಾದೇಶಿಕ ಕಚೇರಿ ತೆರೆಯಲಾಗಿದೆ. 6-8 ತಿಂಗಳಲ್ಲಿ ಮತ್ತೆ 12 ಶಾಖೆ ತೆರೆಯಲಾಗುವುದು ಎಂದರು.
ಸರ್ಕಾರದ ವಿರುದ್ಧ ಮಾಜಿ ಡಿಸಿಎಂಗಳ ಆಕ್ರೋಶ
ಬೆಳಗಾವಿ/ ಬಳ್ಳಾರಿ: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಹಾಗೂ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಚಿಕ್ಕೋಡಿಯ ಗಾಂಧಿಕಟ್ಟೆಯಲ್ಲಿ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆಬಹಿರಂಗ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಸರ್ಕಾರದ ರು. 1 ಕೆಜಿ ಅಕ್ಕಿ ಬಡವರಿಗೆ ಸೇರುವ ಬದಲಾಗಿ ವಿದೇಶಕ್ಕೆ ಸೇರುತ್ತಿದೆ. ಕಾಂಗ್ರೆಸ್‌ನವರು ದುಡ್ಡು ಹೊಡೆಯುವುದನ್ನು ಪತ್ತೆ ಹಚ್ಚಲು ಸಮಿತಿ ನೇಮಿಸುವ ಪರಿಸ್ಥಿತಿ ಬಂದಿದೆ ಎಂದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಓಬಳೇಶ ನಾಪಪತ್ರ ಸಲ್ಲಿಕೆ ನಂತರ ಮಾತನಾಡಿದ ಆರ್. ಅಶೋಕ್, ಆದಷ್ಟು ಬೇಗ ಸರ್ಕಾರ ಹೋಗಲಿ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.