ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂಗಡ್ಡೆ ಬೆಳೆಗೆ ಅಂಗಮಾರಿ: ತಜ್ಞರ ತಂಡದಿಂದ ಪರಿಶೀಲನೆ

Srinivasa Murthy VN
Updated On : 3 Aug 2014, 9:46 am

ಕ.ಪ್ರ. ವಾರ್ತೆ, ಆಲೂರು,  ಆ.3
ತಾಲೂಕಿನಲ್ಲಿ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಬೀಳುತ್ತಿರುವುದರಿಂದ ಮರಸು ಹೊಸಳ್ಳಿ, ತೊರಗರವಳ್ಳಿ, ಗ್ರಾಮಗಳ ಸುತ್ತ ಮುತ್ತ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ.
 ತೋಟಗಾರಿಕೆ ಇಲಾಖೆ ತಂಡದಿಂದ ತಾಕುಗಳನ್ನು ಪರಿಶೀಲಿಸಿ, ಇಲಾಖೆಯಿಂದ ಆಲೂಗೆಡ್ಡೆ ವಿಶೇಷ ಪ್ಯಾಕೇಜ್ ಅಡಿ ಶೇ 50 ರ ಸಹಾಯಧನದಲ್ಲಿ ರೈತರಿಗೆ ವಿತರಿಸುತ್ತಿರುವ ಮಾಕ್ಸಿಮೇಟ್ ಶಿಲಿಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 2.5 ಗ್ರಾಂ ರಂತೆ ಎಲೆಗಳ ಕೆಳಭಾಗಕ್ಕೆ ತಗಲುವಂತೆ ಸಿಂಪಡಿಸಲು ಹಾಗೂ ಬೆಳೆಯನ್ನು ಉಳಿಸಿಕೊಳ್ಳಲು ಕೋರಿದೆ.  ಅಂಗಮಾರಿ ರೋಗದ ಲಕ್ಷಣಗಳಾದ ಎಲೆಗಳ ಮೇಲೆ ಕಪ್ಪು ಮಚ್ಚೆಗಳು ಕಾಣಿಸಿಕೊಂಡರೆ ತಕ್ಷಣವೇ ಡೈಮಿಥೋಮಾರ್ಫ್ ಆಕ್ರೋಬ್ಯಾಟ್‌ಟಿ ಶಿಲಿಂದ್ರನಾಶಕವನ್ನು 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಲು ಕೋರಿದೆ.

ತೋಟಗಾರಿಕೆಗೆ ತಂತ್ರಜ್ಞಾನ ಅಳವಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಹಾಸನ, ಆ.3
ಕಂದಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಇತ್ತೀಚೆಗೆ ಎರಡು ದಿನಗಳ ತರಬೇತಿಯನ್ನು ಆಯೋಜಿಸಲಾಗಿತ್ತು.
 ಕಾರ್ಯಕ್ರಮವನ್ನು ಕೇಂದ್ರದ ಮುಖ್ಯಸ್ಥ ಮತ್ತು ಕಾರ್ಯಕ್ರಮ ಸಂಯೋಜಕ ಡಾ.ಬಿ.ಎಸ್.ಬಸವರಾಜು ಉದ್ಘಾಟಿಸಿ ಮಾತನಾಡಿ, ಕೇಂದ್ರದ ವಿಜ್ಞಾನಿಗಳಿಂದ ಅಧುನಿಕ ತಾಂತ್ರಿಕತೆಗಳ ಪೂರ್ಣ ಮಾಹಿತಿಯನ್ನು
ಅರ್ಥೈಸಿಕೊಂಡು ತಮ್ಮ ಕ್ಷೇತ್ರಗಳಲ್ಲಿ ರೈತರಿಗೆ ಮಾರ್ಗದರ್ಶಿಗಳಾಗಿ ಉತ್ತಮ ಇಳುವರಿ ಮತ್ತು ಲಾಭಗಳಿಸಲು ಸಹಕಾರಿಯಾಗಬೇಕೆಂದು ತಿಳಿಸಿದರು.
ತಾಂತ್ರಿಕತೆ ಅಳವಡಿಸಿಕೊಳ್ಳಿ: ತೋಟಗಾರಿಕೆ ವಿಜ್ಞಾನಿ ಡಾ.ಟಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ,  ತೋಟಗಾರಿಕೆ ಬೆಳೆಗಳಲ್ಲಿ ತಳಿಗಳ ಆಯ್ಕೆ ಇಳುವರಿ ಮೇಲೆ ಹೆಚ್ಚು ಪರಿಣಾಮ ಬೀರುವುದರ ಜತೆಗೆ ಸಮಗ್ರ ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ಅಳವಡಿಕೆ ಬಹುಮುಖ್ಯವಾಗಿದ್ದು, ವಿಸ್ತರಣಾ ಕಾರ್ಯಕರ್ತರುಗಳು ರೈತರಿಗೆ ಈ ನಿಟ್ಟಿನಲ್ಲಿ ಉತ್ತೇಜನ, ಪ್ರೋತ್ಸಾಹ ನೀಡಿ, ಮನವರಿಕೆ ಮಾಡಿಕೊಡುವುದು ಅತಿ ಮುಖ್ಯ ಎಂದು ತಿಳಿಸಿದರು.
 ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್.ಚೆನ್ನಕೇಶವ, ಡಾ. ಎಂ. ಶಿವಶಂಕರ್, ಡಾ.ಜಿ.ಎಸ್.ಕೃಷ್ಣಾರೆಡ್‌ಡಿ, ಡಾ. ಹೆಚ್. ಕೆ. ಪಂಕಜಾ ಮತ್ತು ಡಾ.ಎ.ಸಿ ಗಿರೀಶ್ ಇದ್ದರು. ಜಿಲ್ಲೆಯ ತೋಟಗಾರಿಕೆ ಇಲಾಖೆಯ ಮತ್ತು ಜೆಎಲ್‌ಜೆ ಸಂಸ್ಥೆಯ 20 ವಿಸ್ತರಣಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement