ಕಾಚೇನಹಳ್ಳಿ ನೀರಾವರಿ ತಿಂಗಳಲ್ಲಿ ಪೂರ್ಣ
ಚನ್ನರಾಯಪಟ್ಟಣ: ಕಾಚೇನಹಳ್ಳಿ ಏತ ನೀರಾವರಿಯ ಮೊದಲ ಹಂತದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ರೈತರ ಜಮೀನಿಗೆ ನೀರು ಹಾಯಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.
ತಾಲೂಕಿನ ಆನೆಕೆರೆ ಗ್ರಾಮದಲ್ಲಿ ಪಟ್ಟಾಭಿರಾಮ ಮಂದಿರ ಹಾಗೂ ಕುಡಿಯುವ ನೀರು ಯೋಜನೆಯ ಓವರ್ ಟ್ಯಾಂಕ್ ಉದ್ಘಾಟಿಸಿ ಮಾತನಾಡಿ, ಕಾಚೇನಹಳ್ಳಿ ಏತ ನೀರಾವರಿಯ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ಮಟ್ಟದಲ್ಲಿದ್ದು, ಮುಂದಿನ ತಿಂಗಳಲ್ಲಿ ರೈತರಿಗೆ ನದಿಯಿಂದ ನೇರವಾಗಿ ನೀರೆತ್ತುವ ಕಾಮಗಾರಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸದ್ಯದಲ್ಲೇ ಕಾಮಗಾರಿ ಪೂರ್ಣ: ಮೊದಲ ಹಂತದ ಕಾಮಗಾರಿಯಲ್ಲಿ ಒಂದು ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ವಿದ್ಯುತ್ ಸಂಪರ್ಕ ಪಡೆಯುವುದು ಬಾಕಿಯಿದ್ದು, ಅದಕ್ಕೆ ಸರ್ಕಾರದಿಂದ ಒಪ್ಪಿಗೆ ನೀಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಜತೆಗೆ ದಂಡಿಗನಹಳ್ಳಿ ಹೋಬಳಿಗೆ ಬರುವ ಎಲ್ಲಾ ಗ್ರಾಮಗಳಿಗೂ ನದಿಯಿಂದ ನೀರೆತ್ತಿ ಶುದ್ಧ ಕುಡಿಯುವ ನೀರು ಯೋಜನೆ ಮಂಜೂರಾಗಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಹಣ ನೀಡಿಲ್ಲ: ಮಂಗಳೂರು ಬೆಂಗಳೂರು ರೇಲ್ವೆ ಮಾರ್ಗಕ್ಕೆ ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಚಾಲನೆ ನೀಡಿದ್ದು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, 10 ವರ್ಷದಿಂದ ಕೇಂದ್ರದ ಯುಪಿಎ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರೂ ಕಾಮಗಾರಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.
ಮಂಗಳೂರು ಬಂದರಿನಿಂದ ಮದ್ರಾಸ್ ಬಂದರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರೇಲ್ವೆ ಮಾರ್ಗಕ್ಕೆ ದೇವೇಗೌಡ ಚಾಲನೆ ನೀಡಿದರು. ಆದರೆ, ತಮ್ಮ ರಾಜ್ಯದವರೇ ಕಳೆದ 10 ವರ್ಷದಿಂದ ರೇಲ್ವೆ ಮಂತ್ರಿಗಳಾಗುತ್ತಾ ಬಂದಿದ್ದರೂ ಕಾಮಗಾರಿಗೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು.
1ರು. ಅಕ್ಕಿ ಚುನಾವಣೆ ಗಿಮಿಕ್: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಸರ್ಕಾರ ರಚನೆಗೊಂಡ ತಕ್ಷಣದಲ್ಲಿಯೇ 1ರು. ಅಕ್ಕಿ ನೀಡುವಲ್ಲಿ ಮುಂದಾದರು. ಈ ಯೋಜನೆಗಾಗಿ 9 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಹಾಗೂ ಹೀಗೂ ಲೋಕಸಭೆ ಚುನಾವಣೆವರೆಗೆ 1ರು.ಗೆ ಅಕ್ಕಿ ಸಿಗುತ್ತದೆ. ಆನಂತರ, ಈ ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಆರೋಪಿಸಿದ ಅವರು ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ರೈತರ ಸಾಲ ಮನ್ನಾ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಸಾಲ ಮನ್ನಾ ಮಾಡಲಾಗಿತ್ತು: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದಾಗಿದ್ದು, ಹಾಗೇನಾದರೂ ಕಾಳಜಿ ಇದೆ ಎಂದಾದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮಾತ್ರ. ರಾಜ್ಯದಲ್ಲಿ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾತ್ರ ಸಾಲ ಮನ್ನಾ ಮಾಡಲಾಗಿತ್ತು ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾರಾಯಣ್, ಕಾವೇರಿ ನೀರಾವರಿ ನಿಗಮದ ಕಾರ್ಯ ಪಾಲಕ ಇಂಜನಿಯರ್ ಚಿಕ್ಕಮಲ್ಲಯ್ಯ ಇದ್ದರು.