ಚಿರತೆ ಹಿಡಿಯೋದ್ಯಾವಾಗ?
ಕ.ಪ್ರ.ವಾರ್ತೆ ಹಾಸನ ಫೆ. 9
ಜಿಲ್ಲೆಯ ನಾಗನಹಳ್ಳಿಯಲ್ಲಿ ಫೆ. 5ರ ಸಂಜೆ ಅಮಾಯಕ ಬಾಲಕನನ್ನು ಬಲಿತೆಗೆದುಕೊಂಡ ಚಿರತೆಯನ್ನು ಹಿಡಿದೇ ತೀರುವುದಾಗಿ ಪೌರುಷ ತೋರಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗ ನಾಪತ್ತೆಯಾಗಿದ್ದಾರೆ.
ಘಟನೆ ನಡೆದಿದ್ದ ಸ್ಥಳದಲ್ಲಿ ಒಂದು ಬೋನಿಟ್ಟು ಅರಣ್ಯ ಇಲಾಖೆಯವರು ಮಾಯವಾಗಿದ್ದರೆ, ಪೊಲೀಸರು ಮಾತ್ರ ಊರು ಕಾಯುತ್ತಿದ್ದಾರೆ. ಈ ಕ್ರಮದಿಂದ ಒಂದೆಡೆ ಆಕ್ರೋಶ ಮತ್ತೊಂದೆಡೆ ಚಿರತೆ ಭಯದಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಆಕ್ರೋಶ: ಈ ನರಭಕ್ಷಕ ಚಿರತೆ 7 ವರ್ಷದ ಬಾಲಕನನ್ನು ಬಲಿತೆಗೆದುಕೊಂಡ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆ ನೋಡಿದರೆ ಚಿರತೆಯನ್ನು ಹಿಡಿದೇ ಬಿಡುವುದಾಗಿ ಹೇಳಿದ್ದರು. ವಿಪರ್ಯಾಸ ಎಂದ್ರೆ ಹೀಗೆ ಮಾತಾಡಿ 4 ದಿನ ಕಳೆದರೂ ಚಿರತೆ ಹಿಡಿಯುವುದಿರಲಿ, ಒಬ್ಬನೇ ಒಬ್ಬ ಸಿಬ್ಬಂದಿಯೂ ಸ್ಥಳದಲ್ಲಿ ಇಲ್ಲ. ಅರಣ್ಯಾಧಿಕಾರಿಗಳು, ಸಿಬ್ಬಂದಿಗಳ ಈ ನಿರ್ಲಕ್ಷತೆಗೆ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲೂ ಚಿರತೆ ಗ್ರಾಮದ ಆಸುಪಾಸಿನಲ್ಲೇ ಹೊಂಚು ಹಾಕುತ್ತಿದ್ದು, ಆಗುವ ಅನಾಹುತಕ್ಕೆ ಯಾರು ಹೊಣೆ ಎನ್ನುತ್ತಿದ್ದಾರೆ. ಆತಂಕಕಾರಿ ವಿಷಯ ಅಂದ್ರೆ ಬಾಲಕನನ್ನು ಬಲಿ ತೆಗೆದುಕೊಂಡ ಚಿರತೆ ಸೇರಿ ಒಟ್ಟು 3 ಚಿರತೆಗಳು ಈ ಭಾಗದಲ್ಲೇ ಓಡಾಡುತ್ತಿವೆ. ಕಳೆದ ರಾತ್ರಿ ನಾಗನಹಳ್ಳಿ ಗ್ರಾಮದ ಸಣ್ಣಸ್ವಾಮಿ ಎಂಬುವರಿಗೆ ಸೇರಿದ ಕುರಿ ಚಿರತೆಗೆ ಬಲಿಯಾಗಿದೆ. ವಾಸ್ತವ ಹೀಗಿರುವಾಗಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲಿ ಹೋಗಿದ್ದಾರೆ ಅನ್ನೋದು ಊರಿನ ಮಹಿಳೆಯರ ಪ್ರಶ್ನೆ.
ಒತ್ತಾಯ: ಊರಿನವರೆಲ್ಲಾ ಚಿರತೆಗೆ ಬಲಿಯಾದ್ರೆ ಎಲ್ಲರಿಗೂ ಪರಿಹಾರ ಕೊಡುತ್ತಾರಾ ಎಂದು ಕಿಡಿಕಾರಿರುವ ಮಹಿಳೆಯರು, ಶೀಘ್ರವೇ ನರಭಕ್ಷಕ ಚಿರತೆ ಹಿಡಿಯುತ್ತೇವೆ ಎಂದವರು ಈಗ ಸುಳಿವಿಲ್ಲದಂತೆ ಆಗಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಚಿರತೆ ಹಿಡಿಯಲಿ ಎಂದು ಒತ್ತಾಯಿಸಿದ್ದಾರೆ.
ಹಾಸನ- ಹೊಳೆನರಸೀಪುರ ಭಾಗದಲ್ಲಿ ಮಾತ್ರವಲ್ಲದೆ, ಕಾಡಾನೆ ಹಾವಳಿ ಹೆಚ್ಚಿರುವ ಸಕಲೇಶಪುರ ತಾಲೂಕಿನಲ್ಲೂ ಚಿರತೆ ಹಾವಳಿ ಶುರುವಾಗಿರುವುದು ಇಡೀ ಜನರಲ್ಲಿ ಭಯ ಮೂಡಿಸಿದೆ. ಕಳೆದ ರಾತ್ರಿ ತಾಲೂಕಿನ ಬಿಸ್ಲೆ, ಮಾವಿನೂರು ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಚಿರತೆ ಕುರಿ ಸೇರಿ 3 ಪ್ರಾಣಿಗಳನ್ನು ಭಕ್ಷಿಸಿದೆ. ಹೀಗಾಗಿ ಜಿಲ್ಲಾದ್ಯಂತ ವ್ಯಾಪಿಸಿರುವ ಚೀತಾ ಹಾವಳಿಗೆ ಕಡಿವಾಣ ಹಾಕಬೇಕು ಅನ್ನೋದು ಜಿಲ್ಲೆಯ ಜನರ ಆಗ್ರಹವಾಗಿದೆ.
ಪ್ರತಿಭಟನೆಯ ಎಚ್ಚರಿಕೆ
ಗ್ರಾಮದಲ್ಲಿ ಹೆಚ್ಚಾಗಿರುವ ಚಿರತೆ ಹಾವಳಿಯಿಂದ ಗ್ರಾಮವನ್ನು ತಪ್ಪಿಸಬೇಕು. ಕೂಡಲೇ ಈ ಭಾಗದಲ್ಲಿ ಇರುವತಹ ಚಿರತೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಇಲ್ಲವಾದರೆ ಅವುಗಳನ್ನು ಕೊಂದಾದರು ಸಹ ಗ್ರಾಮದಲ್ಲಿ ಇರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಸುತ್ತಮುತ್ತ ಚಿರತೆಗಳು ಹೆಚ್ಚಾಗಿದ್ದು, ಬೆಳಗಿನ ಹೊತ್ತಿನಲ್ಲೇ ಗ್ರಾಮದೊಳಗೆ ನುಗ್ಗಿ ಬೇಟೆಯಾಡುತ್ತಿವೆ. ತೇಜಸ್ನ್ನು ಚಿರತೆ ಗ್ರಾಮದೊಳಗೆ ನುಗ್ಗಿ ಹೊತ್ತೊಯ್ದಿತ್ತು. ಇದರಿಂದ ಬೆಳಗಿನ ಹೊತ್ತಿನಲ್ಲಿ ಗ್ರಾಮದಲ್ಲಿ ಓಡಾಡಲು ಭಯ ಆಗುತ್ತಿದೆ. ಯಾವಾಗ ಚಿರತೆ ಬಂದು ದಾಳಿ ಮಾಡುತ್ತೆ ಅನ್ನೋ ಹೆದರಿಕೆ ಕಾಡುತ್ತಿದೆ.
- ಕುಮಾರಿ ಊರಿನ ಮಹಿಳೆ
ಚಿರತೆಗಳು ಕಣ್ಣಮುಂದೆನೇಅಡ್ಡಾಡುತ್ತಿವೆ. ಗ್ರಾಮದೊಳಗೆ ರಾಜಾರೋಷವಾಗಿ ಬಂದು ನಾಯಿ, ಕುರಿಗಳನ್ನು ಎಳೆದುಕೊಂಡು ಹೋಗುತ್ತಿವೆ. ಈಗಷ್ಟೆ 7 ವರ್ಷದ ತೇಜಸ್ನ್ನು ತಿಂದು ಹಾಕಿರುವುದರಿಂದ ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡುವುದಕ್ಕೆ ಭಯವಾಗುತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯರು ಸಹ ಒಬ್ಬೊಬ್ಬರಾಗಿ ಓಡಾಡಲು ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆ ಆದಷ್ಟು ಬೇಗನೇ ಚಿರತೆಗಳನ್ನು ಹಿಡಿಯಬೇಕು.
-ಸಣ್ಣಸ್ವಾಮಿಗ್ರಾಮಸ್ಥ