ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿರ್ಲಕ್ಷಿತ ಮಹಿಳೆಯರಲ್ಲಿ ಶೇ. 95ರಷ್ಟು ವೇಶ್ಯಾವಾಟಿಕೆಗೆ

Srinivasa Murthy VN
Updated On : 9 Feb 2014, 9:29 am

ಹಾಸನ: ನಿರ್ಲಕ್ಷಿತ ಮಹಿಳೆಯರಲ್ಲಿ ಶೇ. 95ರಷ್ಟು ಮಹಿಳೆಯರು ವೇಶ್ಯಾವಾಟಿಕೆಗೆಗೆ ದೂಡಲಾಗುತ್ತಿದೆ ಎಂದು  ಹೈಕೋರ್ಟ್ ನ್ಯಾಯಾಧೀಶ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ ಎನ್. ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ..
ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಶನಿವಾರ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ನ್ಯಾಯಾಧೀಶರಿಗೆ ನಿರ್ಲಕ್ಷಿತ ಮಹಿಳೆಯರ ಮೇಲಿನ ದೌರ್ಜನ್ಯ, ಕಾನೂನು ಮತ್ತು ಸಾಮಾಜಿಕ ದೃಷ್ಟಿಕೋನಗಳು ಎಂಬ ವಿಷಯ ಕುರಿತ ನಡೆದ ಸಂವೇದನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಹುರಾಷ್ಟ್ರೀಯವಾಗಿ ಮಹಿಳೆಯರನ್ನು ವೇಶ್ಯಾವೃತ್ತಿಗೆ ದೂಡುವ ಜಾಲ ಮತ್ತು ವಿಷವೃತ್ತದಿಂದ ಮಹಿಳೆಯರನ್ನು ಹೊರತರುವಂತಹ ಕಾರ್ಯ ಆಗಬೇಕು. ಶೇ. 95ರಷ್ಟು ಮಹಿಳೆಯರು ಈ ವೃತ್ತಿಗೆ ಇಷ್ಟುಪಟ್ಟು ಬಂದಿಲ್ಲ. ಅವರು ನಾನಾ ಕಾರಣಗಳಿಂದ ನಿರ್ಲಕ್ಷ್ಯತೆಗೆ ಒಳಗಾಗಿ ಈ ವೃತ್ತಿಯಲ್ಲಿದ್ದಾರೆ ಅಷ್ಟೇ ಎಂದು ಹೇಳಿದರು.
ಜಾಲದಿಂದ ಹೊರತರಬೇಕು: ವೇಶ್ಯಾವೃತ್ತಿಯು ಇಂದು ನಿನ್ನೆಯದಲ್ಲ. ಮನುಷ್ಯ ಹುಟ್ಟಿದಾಗಿನಿಂದಲೂ ಇದೆ. ಅದನ್ನು ಸಂಪೂರ್ಣವಾಗಿ ನಿರ್ಣಾಮ ಮಾಡುವುದಕ್ಕೆ ಸಾಧ್ಯವಿಲ್ಲ. ಈ ವೃತ್ತಿಗೆ ಮಹಿಳೆಯರನ್ನು ದೂಡುತ್ತಿರುವಂತ ಜಾಲವನ್ನು ಪತ್ತೆ ಹಚ್ಚಿ ತಡೆಗಟ್ಟಬೇಕು.
ಪ್ರಪಂಚದಾದ್ಯಂತ ಈ ವೃತ್ತಿ ಉಲ್ಬಣಗೊಂಡಿದ್ದು, ಬಡತನ, ಶಿಕ್ಷಣ ಇಲ್ಲದಿರುವುದು ಮತ್ತು ಮನೆಯ ಪರಿಸರದಿಂದ ಈ ವೃತ್ತಿಗೆ ಮಹಿಳೆಯರು ಬೀಳತೊಡಗಿದ್ದಾರೆ.
ವೇಶ್ಯೆ ವೃತ್ತಿಯಲ್ಲಿ ಇದ್ದಾಗ ಆಕೆಯ ಮನ ಪರಿವರ್ತನೆಗೊಂಡರೆ ಅಂತವರನ್ನು ಆ ಜಾಲದಿಂದ ಹೊರತರಬೇಕು ಎಂದರು.
ಉತ್ತರ ಕರ್ನಾಟಕದವರು: ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ನಿರ್ದೇಶಕ ಎಚ್.ಎಸ್. ಅಶೋಕಾನಂದ್ ಮಾತನಾಡಿ, 1.30 ಲಕ್ಷದಷ್ಟು ಮಹಿಳೆಯರು ಲೈಂಗಿಕತೆಯಲ್ಲಿ ತೊಡಗಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಇದು ಹೆಚ್ಚಾಗಿದ್ದು, ಇದಕ್ಕೆ ಬಡತನ ಹಾಗೂ ದೇವದಾಶಿ ಪದ್ಧತಿಯೇ ಕಾರಣವಾಗಿದೆ ಎಂದ ಅವರು, ಬಾಂಬೆ, ಪುಣೆಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ಉತ್ತರ ಕರ್ನಾಟಕದ ಸಾಕಷ್ಟು ಮಹಿಳೆಯರು ಈ ವೃತ್ತಿಯಲ್ಲಿ ನಾನಾ ಕಾರಣದಿಂದ ತೊಡಗಿದ್ದಾರೆ ಎಂದರು.
ಈ ವೃತ್ತಿಯಲ್ಲಿ ಇರುವಂತಹ ಮಹಿಳೆಯರು ತಾವು ಸಂಪಾದಿಸಿದಂತಹ 200 ರು.ಗಳಲ್ಲಿ ಕೇವಲ 50ರಿಂದ 60 ರು.ಗಳನ್ನು ಮಾತ್ರ ತಾವು ತೆಗೆದುಕೊಂಡು ಉಳಿಕೆ ಹಣವನ್ನು ಇತರರಿಗೆ ಹಂಚಬೇಕಾಗಿದೆ. ಇಂತಹ ವೃತ್ತಿಗೆ ಮಹಿಳೆಯರನ್ನು ತಳ್ಳುವವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಆಗುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕ ಮೋಹನನ್ಶ್ರೀಪಾದ ಸಂಕೊಳ್ಳಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಚಿಕ್ಕಮಗಳೂರು ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್.ಎಸ್. ಕಮಲ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್.ಜಿ. ವಿಜಯಕುಮಾರಿ, ಹೆಚ್ಚವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ. ರಶ್ಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement