ಬೋರನಕೊಪ್ಪಲು ಸಮುದಾಯ ಭವನ ಉದ್ಘಾಟನೆ ಇಂದು
ಹಾರನಹಳ್ಳಿ: ಇಲ್ಲಿಗೆ ಸಮೀಪದ ಬೋರನಕೊಪ್ಪಲು ಗ್ರಾಮದಲ್ಲಿ ಶ್ರೀ ರಾಮಮಂದಿರ ಪ್ರವೇಶ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮ ಫೆ. 10ರಂದು ನಡೆಯಲಿದೆ. ಬೆಳಗ್ಗೆ 6ಕ್ಕೆ ಗಂಗಾಪೂಜೆ ಆಲಯ ಪ್ರವೇಶ ರಾಮತಾರಕ ಹೋಮ ನೆರವೇರಲಿದೆ. ಬೆಳಗ್ಗೆ 10ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬೆಲಗೂರಿನ ಬಿಂದುಮಾಧವ ಶರ್ಮಜೀ ಕಾಡು ಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಮಹಾಸ್ವಾಮಿ, ಬಸವತತ್ವ ಪೀಠದ ಜಯಬಸವಾನಂದ ಮಹಾಸ್ವಾಮಿ, ಹಾಸನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಶಂಭುನಾಥಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ರೇವಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ಷೇತ್ರದ ಶಾಸಕ ಕೆ.ಎಂ ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸುವಂತೆ ರಾಮಮಂದಿರ ಹಾಗೂ ಸಮುದಾಯಭವನದ ಸದಸ್ಯರು ಕೋರಿದ್ದಾರೆ.
ಪಹಣಿ, ಬೆಳೆ ದಾಖಲು ತರಬೇತಿ
ಹಾಸನ: ಪಹಣಿಯಲ್ಲಿ ಬೆಳೆ ವಿವರಗಳ ದಾಖಲಾತಿ ಮತ್ತು ಬೆಳೆ ಕಟಾವು ಪ್ರಯೋಗಗಳ ಮಹತ್ವದ ಬಗ್ಗೆ ಪುನರ್ ಮನನ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಕೃಷಿ ಬೆಳೆ ಆಧಾರದ ಮೇಲೆ ಕಂದಾಯ ನಿರ್ಧಾರವಾಗುತ್ತದೆ. ಗ್ರಾಮಲೆಕ್ಕಿಗರು ಬೆಳೆಯನ್ನು ದಾಖಲು ಮಾಡಿ ಲೆಕ್ಕ ನೀಡಬೇಕು ಎಂದರು. ರೈತರು ಬೆಳೆ ವಿಮೆ ಮಾಡಿಸಿ, ಅದರ ಕಂತನ್ನು ಸಂಬಂಧಪಟ್ಟ ಬ್ಯಾಂಕಿನಲ್ಲಿ ಕಟ್ಟುತ್ತಾರೆ. ಬೆಲೆ ನಷ್ಟವಾದ ವೇಳೆ ಅಂತವರನ್ನು ಗುರುತಿಸಿ ಪರಿಹಾರ ನೀಡಬೇಕು. ಕೃಷಿಕ್ ಪಹಣಿ ಬಗ್ಗೆ ತಿಳಿದು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆವಾರು ವಿಸ್ತೀರ್ಣ ಗುರುತಿಸುವುದು. ಸಹಾಯಕ ಕೃಷಿ ನಿರ್ದೇಶಕರು ಬೆಳೆ ಕಟಾವಿನ ಪ್ರಾಮುಖ್ಯತೆಯನ್ನು ಹೇಳಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಚಪ್ಪ ಮಾತನಾಡಿ, ವರ್ಷದಲ್ಲಿ ಮೂರು ಋತುಗಳಲ್ಲಿ ಕಡ್ಡಾಯವಾಗಿ ರೈತರು ಬೆಳೆದ ಬೆಳೆಯನ್ನು ನಮೂದಿಸಬೇಕು ಎಂದರು.ಸಹಾಯಕ ಸಂಖ್ಯಾ ಅಧಿಕಾರಿ ವರದರಾಜು ವಂದಿಸಿದರು. ದುದ್ದ ಉಪ ತಹಸೀಲ್ದಾರ್ ಹೊಂಬೇಗೌಡ, ಕೃಷಿ ಇಲಾಖೆಯ ಕೋಕಿಲ ಇದ್ದರು.
ಹೊಯ್ಸಳ ಕಾಲದಲ್ಲೂ ಗಣಿಗಾರಿಕೆ ಬಗ್ಗೆ ಸಾಕ್ಷ್ಯ ಪತ್ತೆ
ಬೇಲೂರು: ಇಲ್ಲಿಯ ಅರಮನೆ ಆವರಣ ಹಗರೆ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಹೊಯ್ಸಳರ ಕಾಲದ ಕೋಟೆಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಪ್ರಕರಣವನ್ನು ಕೇಂದ್ರ ಪುರಾತತ್ವ ಇಲಾಖೆ ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ. ಹೆಬ್ಬಂಡೆಗಳನ್ನು ಸೀಳಿ ಮನೆ ತಳಪಾಯ ಕಟ್ಟುವ ಕಲ್ಲುಗಳನ್ನಾಗಿ ಪರಿವರ್ತಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ಪುರಾತತ್ವ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಇಂದಿನಿಂದ ಕಣ್ಗಾವಲು ವಹಿಸಲಾಗುವುದು ಎಂದು ಪುರಾತತ್ವ ಇಲಾಖೆ ಸಿಬ್ಬಂದಿ ತಿಳಿಸಿದರು. ಸ್ಮಾರಕ ವಿಭಾಗ ಅಧಿಕಾರಿ ಮಂಜುನಾಥ ಹಲಸೆ ಸ್ಥಳಕ್ಕೆ ಭೇಟಿ ನೀಡಿ, ಇನ್ನೂ ಮುಂದೆ ಕಾನೂನಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಇದ್ದರು.
ಆಯವ್ಯಯ ಪೂರ್ವಭಾವಿ ಸಭೆ
ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿಯ 2014-15ನೇ ಸಾಲಿನ ಆಯವ್ಯಯದ 2ನೇ ಪೂರ್ವಭಾವಿ ಸಭೆ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು,ಎಂಜಿನಿಯರ್ ಕವಿತ ಮತ್ತು ಜಯರಾಮ್ ಉಪಸ್ಥಿತರಿದ್ದರು.ಸಭೆಯಲ್ಲಿದ್ದ ಪಟ್ಟಣ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಪಟ್ಟಣದ ಅಭಿವೃದ್ಧಿ ಕುರಿತು ಸಲಹೆಗಳನ್ನು ಇತ್ತರು.
ಮುತಾಹಿರ್ ಪಾಷಾ ನೇಮಕ
ಅರಕಲಗೂಡು: ಹಾಸನ ಜಿಲ್ಲಾ ಜಾತ್ಯಾತೀತ ಜನತಾದಳದ ಅಲ್ಪ ಸಂಖ್ಯಾತ ವಿಭಾಗದ ಕಾರ್ಯದರ್ಶಿಯನ್ನಾಗಿ ಅರಕಲಗೂಡಿನ ಮುತಾಹಿರ್ ಪಾಷಾ ನೇಮಕಗೊಂಡಿದ್ದಾರೆ.
ಚನ್ನೇಗೌಡರಿಗೆ ಕವಿಗೋಷ್ಠಿ ಬಳಗ ಅಭಿನಂದನೆ
ಹಾಸನ: ಹಾಸನ ತಾಲೂಕು ಮೂರನೇ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿ, ನಾಟಕಕಾರ, ಲೇಖಕ, ವಿಮರ್ಶಕ, ಚಿಂತಕ ಹಾಗೆಯೇ ಮನೆ ಮನೆ ಕವಿಗೋಷ್ಠಿಯ ಹಿರಿಯ ಸದಸ್ಯರೂ ಆದ ಎನ್.ಎಲ್. ಚನ್ನೇಗೌಡ ಅವರಿಗೆ ಮನೆ ಮನೆ ಕವಿಗೋಷ್ಠಿಯ ಬಳಗ ಅಭಿನಂದಿಸಿದೆ. ಚನ್ನೇಗೌಡರು ಹಾಸನ ತಾಲೂಕಿನ ನಾಯಕರಹಳ್ಳಿ ಗ್ರಾಮದ ಲಕ್ಷ್ಮೇಗೌಡ, ಹನುಮಮ್ಮ ದಂಪತಿಗೆ 1949ರ ಜ. 20ರಂದು ಜನಿಸಿದರು. ನಿವೃತ್ತಿ ಬ್ಯಾಂಕ್ ಉದ್ಯೋಗಿಯಾಗಿರುವ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರವನ್ನುಅಪ್ಪಿಕೊಂಡು ಬೆಳೆದವರು ಎಂದು ಕವಿಗೋಷ್ಠಿಯ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ
ಹೊಳೆನರಸೀಪುರ: ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು 5ನೇ ತರಗತಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶುಲ್ಕ ನಿಗದಿ: ಈ ವಸತಿ ಶಾಲೆಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಊಟ, ವಸತಿ, ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ , ಇತ್ಯಾದಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು. ಪ್ರವೇಶ ಪಡೆಯುವವರ ವಾರ್ಷಿಕ ಆದಾಯ ಮಿತಿ ಪ್ರವರ್ಗ - 1 ರ ವಿದ್ಯಾರ್ಥಿಗಳಿಗೆ 1,00,000 ರು., ಪರಿಶಿಷ್ಟ ಜಾತಿ 2,00,000 ರು., ಹಿಂದು ಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 44,500 ರು. ನಿಗದಿಪಡಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ. 50ರಷ್ಟು ಸೀಟು ಬಾಲಕಿಯರಿಗೆ ಶೇ. 50 ರಷ್ಟು ಸೀಟು ಬಾಲಕರಿಗೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಶೇ. 100 ರಷ್ಟು ಸೀಟು ಬಾಲಕಿಯರಿಗೆ ಕಾಯ್ದಿರಿಸಲಾಗಿದೆ. ಈ ವಸತಿ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು.
ಅರ್ಜಿ ವಿತರಣೆ ಆರಂಭ: ಅರ್ಜಿಗಳನ್ನು ಈಗಾಗಲೇ ವಿತರಿಸಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಫೆ. 24 ಕೊನೆಯ ದಿನ. ಅರ್ಜಿಗಳನ್ನು ತಾಲೂಕಿನ ಎಲ್ಲಾ ವಸತಿ ಶಾಲಾ ಪ್ರಾಂಶು ಪಾಲರು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.ಪ್ರವೇಶ ಪರೀಕ್ಷೆಯು ಫೆ. 23ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹೊಳೆನರಸೀಪುರ ಕೇಂದ್ರದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಮೊ. 9480884356, ಸಂಪರ್ಕಿಸಬಹುದು.