ಶಿಕ್ಷಣ ವಿರೋಧಿ ನೀತಿ ವಿರುದ್ಧ ನಿರ್ಣಯ
ಹಾಸನ: ಶಿಕ್ಷಣದ ಖಾಸಗೀಕರಣ ವಿರೋಧಿಸಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹಾಗೂ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಎಸ್‌ಎಫ್‌ಐನ 7ನೇ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದ 2ನೇ ದಿನವಾದ ಶನಿವಾರ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಸಮ್ಮೇಳನವು ಚರ್ಚಿಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಛೆ ಡೊನೇಶನ್ ವಸೂಲಿ ಮಾಡುತ್ತಿದ್ದು, ಡೊನೇಶನ್ ವಸೂಲಿ ತಡೆಗಟ್ಟಲು ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚನೆ ಮಾಡಿ ಡೊನೇಶನ್ ಹಾವಳಿಗೆ ಸೂಕ್ತ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಸಿಗುವಂತೆ ವಿದ್ಯಾರ್ಥಿಗಳ ಪ್ರಮಾಣಕ್ಕನುಗುಣವಾಗಿ ಹಾಸ್ಟೆಲ್‌ಗಳನ್ನು ಹೆಚ್ಚಿಸಬೇಕು.
ಹಾಗೆಯೇ ಮುಂಬರುವ ಬಜೆಟ್‌ನಲ್ಲಿ ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ಭತ್ಯೆಯನ್ನು ಕೇರಳ ಮತ್ತು ತಮಿಳುನಾಡು ಮಾದರಿಯಲ್ಲಿ ಮಾಸಿಕ ರು. 3,500ನಂತೆ ಒಬ್ಬ ವಿದ್ಯಾರ್ಥಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಲಾಯಿತು.
ದೌರ್ಜನ್ಯ ತಡೆಗೆ ಆಗ್ರಹ: ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ತಡೆಗಟ್ಟಲು ಸುಪ್ರಿಂಕೋರ್ಟ್‌ನ ಆದೇಶದಂತೆ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿಗಳನ್ನು ಜಿಲ್ಲಾಧಿಕಾರಿಗಳ ಮುತವರ್ಜಿಯಲ್ಲಿ ಎಲಾ ಕಡೆಗಳಲ್ಲೂ ರಚನೆ ಮಾಡಬೇಕು ಮತ್ತು ದೌರ್ಜನ್ಯವೆಸಗಿದವರಿಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯಿಸಲಾಯಿತು.
ಇದಲ್ಲದೇ, ಶಾಲಾ ಕಾಲೇಜುಗಳ ಬಳಿ ಸಾರಿಗೆ ನಿಲ್ದಾಣಗಳ ನಿರ್ಮಾಣ, ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಲು ಸರ್ಕಾರವನ್ನು ಒತ್ತಾಯಿಸಿದ ವಿದ್ಯಾರ್ಥಿಗಳು, ಆರ್‌ಟಿಇ ಕಾಯ್ದೆಯನ್ನು ಜಾರಿಗೊಳಿಸಲು ತಿರಸ್ಕರಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಪೃಥ್ವಿ, ಮಂಜುನಾಥ್, ನವೀನ್ ಕುಮಾರ ಹಾಗೂ ಇತರರು ಇದ್ದರು.
ನೂತನ ಜಿಲ್ಲಾ ಸಮಿತಿ ಆಯ್ಕೆ
ಎಚ್.ಇ. ಅನ್ಷಾದ್ ಅವರು ಎಸ್‌ಎಫ್‌ಐನ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್, ಉಪಾಧ್ಯಕ್ಷರಾಗಿ ಎನ್.ಡಿ. ಧನಲಕ್ಷ್ಮಿ, ಸಿ.ಎಸ್. ಮಹೇಶ್, ಎಂ. ಆಶಾ, ಕೆ.ಡಿ. ಶಶಿಕುಮಾರ್, ಲಾವಣ್ಯ, ಸಹ ಕಾರ್ಯದರ್ಶಿಗಳಾಗಿ ಅಯ್ಯಪ್ಪರಾಜು, ನುಸ್ರತ್ ಎಚ್.ಗೌತಮಿ, ಶಾಂತರಾಜು ಸೇರಿದಂತೆ 25 ಜನರ ಜಿಲ್ಲಾಸಮಿತಿಯನ್ನು ಆಯ್ಕೆ ಮಾಡಲಾಯಿತು.