ಜೆಡಿಎಸ್ ಅಹಿಂದ ಸಮಾವೇಶ ಇಬ್ಬಂದಿ ನೀತಿ: ಶೇಷೇಗೌಡ
ಹಾಸನ: ಅಹಿಂದ ಸಮಾವೇಶನ ನಡೆಸುವ ಮೂಲಕ ಜೆಡಿಎಸ್ ಇಬ್ಬಂದಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶೇಷೇಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಮೈಸೂರಿನಲ್ಲಿ ಅಹಿಂದ ಹೆಸರಿನಲ್ಲಿ ಸಮಾವೇಶ ಮಾಡಿ, ಶೋಷಿತ ವರ್ಗಕ್ಕೆ ಸೇರಿದ ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದರಾಮಯ್ಯನವರ ಕಾರ್ಯವೈಖರಿಯನ್ನು ಮೆಚ್ಚುವ ಬದಲು ದ್ವೇಷದಿಂದ ಕಾಣುತ್ತಿದ್ದಾರೆ. ಅಹಿಂದ ಸಮಾವೇಶ ನಡೆಸುವಂತಹ ನೈತಿಕತೆ ಜೆಡಿಎಸ್‌ಗೆ ಇಲ್ಲ ಎಂದರು.
ದೇವೇಗೌಡ ಅವಕಾಶವಾದಿ: ಅಹಿಂದ ಸಮಾವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂಬುದನ್ನು ನನ್ನ ಕಣ್ಣಾರೆ ನೋಡಬೇಕು ಎಂದು ದೇವೇಗೌಡರು ಹೇಳುತ್ತಾರೆ.
ಹೀಗೆ ಹೇಳುವ ಇವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ತೃತೀಯ ರಂಗ ಎಂಬ ಬೆದರುಬೊಂಬೆಗೆ ಚಾಲನೆ ನೀಡುವ ದೇವೇಗೌಡರು ಅವಕಾಶವಾದಿವಾಗಿದ್ದಾರೆ ಎಂದು ಟೀಕಿಸಿದರು.
ಹೊಂದಾಣಿಕೆ ಇಲ್ಲ: ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳು ಒಂದೊಂದು ಪಕ್ಷಗಳು ತನ್ನದೇ ಆದ ಸಿದ್ಧಾಂತಗಳನ್ನು ಹೊಂದಿದೆ. ಆದ್ದರಿಂದ ಇವರು ಒಂದುಗೂಡುವುದು ಅಸಾಧ್ಯವಾಗಿದೆ. ಇವರೆಲ್ಲಾ ಸೇರಿ ಒಂದೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿ. ಇವರಲ್ಲಿ ಹೊಂದಾಣಿಕೆ ಇಲ್ಲ ಎಂದರು. ಬಿಜೆಪಿ ನೇತೃತ್ವದಲ್ಲಿ ಎನ್ ಡಿ ಎ ಅಂಗಪಕ್ಷಗಳು ಬಿಜೆಪಿಯ ಕೋಮುವಾದಿ ಅಜೆಂಡದ ಬಗ್ಗೆ ಸಿಡಿದೆದ್ದು ಹೊರ ನಡೆದಿವೆ. ಇದರಲ್ಲಿ ಜೆಡಿಯು, ತೆಲಗುದೇಶಂ, ಎಐಎಡಿಎಂಕೆ ಪಕ್ಷಗಳು ಪ್ರಮುಖ ಪಕ್ಷಗಳಾಗಿವೆ. ಆದ್ದರಿಂದ ಬಿಜೆಪಿ ಮತ್ತು ತೃತೀಯ ರಂಗದ ಆಟ ನಡೆಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್, ರಮೇಶ್, ಯೋಗೇಶ್, ನಾಗೇಶ್ ಹಾಗೂ ಇತರರು ಇದ್ದರು.