ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತ್ತೆ ಕಾಡಾನೆ ದಾಳಿ: ಬೆಳೆ ನಾಶ

Srinivasa Murthy VN
Updated On : 10 Feb 2014, 11:50 am

ಆಲೂರು: ತಾಲೂಕಿನ ನಾನಾ ಕಡೆಗಳಲ್ಲಿ ಕಾಡಾನೆಗಳ ದಾಳಿ ಸೋಮವಾರ ಕೂಡ ಕೆಂಚಮ್ಮನಹೊಸೆಕೋಟೆ ಹೋಬಳಿಯ ಕಲ್ಲಾರೆ, ಕಾಣಗೆರೆ, ಅಡಿಬೈಲು, ಮಾದಿಹಳ್ಳಿ, ನಾಗಾವಾರ, ಹೊನ್ನವಳ್ಳಿ, ಪುರಭೈರವನಹಳ್ಳಿ ಹಾಗೂ ಇತರೆಗಳಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಆನೆಗಳು ಕಳೆದ 1 ವಾರದಿಂದಲೂ ಈ ಗ್ರಾಮಗಳಲ್ಲಿ ಎಡಬಿಡದೆ ದಾಳಿ ನಡೆಸುತ್ತಿದ್ದು, ಇದರಿಂದ ಲಕ್ಷಾಂತರ ರು. ಬೆಳೆ ನಾಶ ಆಗಿರುವುದರ ಜೊತೆಗೆ ಅಪಾಯ ಕಾರಿ ನರಹಂತಕ ಒಂಟಿಸಲಗ ಗ್ರಾಮಗಳಲ್ಲಿ ಹಗಲುಹೊತ್ತಿನಲ್ಲೇ ಕಾಣಸಿಕೊಳ್ಳುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ತಾಲೂಕಿನ ದೊಡ್ಡಬೆಟ್ಟ, ಕರಡಿಬೆಟ್ಟ, ರಂಗನಬೆಟ್ಟ ಹಾಗೂ ಕೊಡಗಿನ ಉಂಬಳಿಬೆಟ್ಟವು ಸೇರಿದಂತೆ ಯಸಳೂರು ಅರಣ್ಯ ಪ್ರದೇಶದಲ್ಲಿ 5 ಗುಂಪುಗಳಾಗಿ ಬೀಡು ಬಿಟ್ಟಿರುವ ಕಾಡಾನೆಗಳು ಇದ್ದು, ಈ ಅರಣ್ಯಪ್ರದೇಶಗಳ ತಪ್ಪಲಿನ ಗ್ರಾಮಗಳಲ್ಲಿ ಹೆಚ್ಚಿನ ಹಾನಿ ಮಾಡುತ್ತಿವೆ.
ಅತ್ತ, ಫೆ.10ರಿಂದಲೇ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಸಚಿವರು ಆಶ್ವಾಸನೆ ಕೊಟ್ಟಿದ್ದರು. ಆದರೆ ಸೋಮವಾರವೂ  ಸಾಕಾನೆಗಳು ಮಾಗಡಿಹಳ್ಳಿ ಕ್ಯಾಂಪಿಗೆ ಬಂದಿಲ್ಲ.
ಫೆ.9ರಂದೇ ಸಾಕಾನೆಗಳು ಮಾಗಡಿಹಳ್ಳಿ ಕ್ಯಾಂಪ್ ಆಗಮಿಸಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಕೇಳಿದರೆ ಆನೆಗಳು ಶಿಬಿರದಿಂದ ಹೊರಟಿವೆ ಎಂಬ ಉತ್ತರ ಬರುತ್ತಿವೆ. ಇಂದು ಸಹ ಕ್ಯಾಂಪ್‌ಗೆ ಸಾಕಾನೆಗಳು ಬಂದಿಲ್ಲ. ಅಧಿಕಾರಿಗಳು ಮಾತು ಹುಸಿಯಾಗಿದೆ.

ಇಲ್ಲೇ ಕ್ರಾಲ್ ನಿರ್ಮಿಸುವುದು ಸೂಕ್ತ
ಈ ಹಿಂದೆ ಅರಣ್ಯಾಧಿಕಾರಿಗಳು ಸಾಕಾನೆಗಳು ಕ್ಯಾಂಪ್‌ನಲ್ಲಿಯೇ ಇವೆ. ಅವುಗಳನ್ನು ಕೊಡಗಿನ ಕಟ್ಟೇಪುರದ ಬಳಿ ಕ್ರಾಲ್ ನಿರ್ಮಿಸಲು ಆನೆಗಳನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು. ಕಟ್ಟೆಪುರ ಬಳಿ 25 ಕ್ರಾಲ್‌ಗಳನ್ನು ನಿರ್ಮಿಸಿ, ಅಲ್ಲಿಯೇ ಈ ಭಾಗದಲ್ಲಿ ಹಿಡಿದ ಆನೆಗಳನ್ನು ಪಳಗಿಸುವುದಾಗಿ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆದು ಒಂದಿಷ್ಟು ಮರದ ದಿಮ್ಮಿಗಳನ್ನು ತಂದು ಹಾಕಲಾಗಿತ್ತು. ಆದರೆ ಕಟ್ಟೆಪುರದಲ್ಲಿ ನಿರ್ಮಿಸಲು ಕಾರಣವೆಂದರೆ ದೊಡ್ಡಬೆಟ್ಟ, ಕರಡಿಬೆಟ್ಟ, ರಂಗನಬೆಟ್ಟ ಸೇರಿದಂತೆ ಕೊಡಗಿನ ಹಂಪಾಪುರ ಬಳಿಯ ಉಂಬಳಿಬೆಟ್ಟ, ಯಸಳೂರು ಹಾಗೂ ಸಕಲೇಶಪುರ, ಕೆರೋಡಿ ಸುತ್ತಮುತ್ತಲ ಗ್ರಾಮದ ಭಾಗದಲ್ಲಿ ಆನೆಗಳು ಬೀಡು ಬಿಟ್ಟಿರುವುದರಿಂದ ಅವುಗಳ ಹಿಡಿದಾಗ ಪಕ್ಕದ ಹೇಮಾವತಿ ಹಿನ್ನೀರಿನ ಇನ್ನೊಂದು ಬಳಿಯ ಕೊಡಗಿನ ಕಟ್ಟೆಪುರದಲ್ಲಿ ಕ್ರಾಲ್‌ಗಳನ್ನು ನಿರ್ಮಿಸಿದರೆ ಪದೇ ಪದೇ ಆನೆಗಳನ್ನು ಸಾಗಿಸಲು ಸುಲಭವಾಗುತ್ತದೆ.
ಆದರೆ, ಅರಣ್ಯ ಸಚಿವರು ಹಾಗೂ ತಕ್ಷಕರಿಗೆ ಇದರ ಬಗ್ಗೆ ಮಾಹಿತಿ ಇದೆಯೋ ಅಥವಾ ಇಲ್ಲವೋ ತಿಳಿಯದಾಗಿದೆ. ಈ ವಿಚಾರಗಳನ್ನು ಮನಗಂಡು ಅರಣ್ಯ ಇಲಾಖೆಯವರು ಈ ಭಾಗದ ಹತ್ತಿರದಲ್ಲೇ ಕ್ರಾಲ್‌ಗಳನ್ನು ನಿರ್ಮಿಸುವುದು ಸೂಕ್ತ ಎಂದು ಸುತ್ತಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ.

ಚಿರತೆ ದಾಳಿಗೆ ಎಮ್ಮೆ ಕರು ಬಲಿ
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಇಲ್ಲದ ಚಿರತೆ ದಾಳಿ ಮತ್ತೆ ಪ್ರಾರಂಭವಾಗಿದ್ದು, ತಾಲೂಕಿನ ಹಿರೀಸಾವೆ ಹೋಬಳಿ ಹೊನ್ನಶೆಟ್ಟಿಹಳ್ಳಿಯಲ್ಲಿ  ಭಾನುವಾರ ರಾತ್ರಿ ಮನೆಯೊಂದರ ಬಳಿ ಕಟ್ಟಿದ್ದ ಎಮ್ಮೆ ಕರುವೊಂದನ್ನು ಚಿರತೆ ಆಹಾರವಾಗಿ ಬಲಿ ತೆಗೆದುಕೊಂಡಿದೆ.  ಹೊನ್ನಶೆಟ್ಟಿಹಳ್ಳಿ ಗ್ರಾಮದ ರಾಜಣ್ಣ ಎಂಬವರ ತೋಟದ ಮನೆಯ ಬಳಿ ಕಟ್ಟಿದ್ದ ಎಮ್ಮೆ ಕರುಮೊಂದನ್ನು ಭಾನುವಾರ ರಾತ್ರಿ ಮಧ್ಯ ರಾತ್ರಿ ತಿಂದು ಹಾಕಿದ್ದು, ಸುತ್ತಮುತ್ತಲಿನ ಜನತೆ ಚಿರತೆ ಹಾವಳಿಯಿಂದ ಭಯಭೀತರಾಗಿದ್ದಾರೆ.
ಆಹಾರಕ್ಕಾಗಿ ಚಿರತೆ ದಾಳಿ ದಿನದಿಂದ ದಿನಕ್ಕೆ ಹಿರೀಸಾವೆ ಹೋಬಳಿಯಲ್ಲಿ ಹೆಚ್ಚಿದ್ದು, ಚಿರತೆಗಳು ಗ್ರಾಮದೊಳಗೆ ಪ್ರವೇಶಿಸಿ ಬೀದಿ ನಾಯಿ ಹಾಗೂ ಸಾಕು ನಾಯಿಗಳನ್ನು ಬೇಟೆಯಾಡಿ ಬಲಿ ತೆಗೆದುಕೊಂಡಿರುವುದರಿಂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕು ನಾಯಿಗಳೇ ಇಲ್ಲದಾಗಿವೆ. ಆಹಾರಕ್ಕಾಗಿ ಕುರಿ ಮತ್ತು ಮೇಕೆಗಳಿಗೆ ಹುಡುಕಾಟ ನಡೆಸುತ್ತಿರುವ ಚಿರತೆಗಳಿಗೆ ಅವು ಸಿಗದಿದ್ದಾಗ ಜಾನುವಾರುಗಳ ಮೇಲೆ ತಮ್ಮ ದಾಳಿ ಪ್ರಾರಂಭಿಸಿವೆ.
ಅರಣ್ಯ ಇಲಾಖೆಯವರು ಕಳೆದ 6 ತಿಂಗಳಿಂದ ಹಿರೀಸಾವೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಚಿರತೆಗಳನ್ನು ಸೆರೆ ಹಿಡಿಯಲು ಬೋನು ಇಟ್ಟಿದ್ದರೂ ಬುದ್ದಿವಂತ ಚಿರತೆಗಳು ಅವುಗಳಿಂದ ದೂರ ಉಳಿದು, ತಮ್ಮ ಚಾಕಚಕ್ಯತೆಯನ್ನು ತೋರುತ್ತಿವೆ.  ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಕರಿಗೌಡ ಹಾಗೂ ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement