ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಕ್ಕೊತ್ತಾಯಕ್ಕಾಗಿ ಆದಿವಾಸಿಗಳ ಪ್ರತಿಭಟನೆ

Srinivasa Murthy VN
Updated On : 10 Feb 2014, 11:51 am

ಕ.ಪ್ರ. ವಾರ್ತೆ ಬೇಲೂರು ಫೆ. 10
ಆದಿವಾಸಿಗಳು ಶಿಕ್ಷಣ, ಆರೋಗ್ಯ ಮತ್ತು ಅರಣ್ಯ ಹಕ್ಕುಗಳಿಂದ ವಂಚಿತರಾಗುತ್ತಿದ್ದು, ನಮ್ಮ ಹಕ್ಕೊತ್ತಾಯಕ್ಕಾಗಿ ಕಾಲ್ನೆಡಿಗೆಯಲ್ಲಿ ವಿಧಾನಸೌಧದವರೆಗೆ ಜಾಥಾ ನಡೆಸಲಾಗುತ್ತಿದೆ ಎಂದು ಬುಡಕಟ್ಟುಗಳ ಒಕ್ಕೂಟ ಸಂಚಾಲಕರಾದ ಹೂರಾಜ್, ಇಂದ್ರೇಶ್, ಆಶೀರ್ವಾದ್ ಹೇಳಿದರು.
ಇಲ್ಲಿನ ಚನ್ನಕೇಶವಸ್ವಾಮಿ ದೇಗುಲದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ಹೊರಟು ಮುಖ್ಯರಸ್ತೆಯಲ್ಲಿ ಸಂಚರಿಸಿ ನಂತರ ತಾಲೂಕು ಕಚೇರಿ ಮುಂದೆ ಕೆಲಕಾಲ ಧರಣಿಯನ್ನು ನಡೆಸಿ ಉಪ ತಹಸೀಲ್ದಾರ್ ಅಣ್ಣೇಗೌಡ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಮತ್ತು ನಗರೀಕರಣದ ಲಾಭಕೋರ ಮಾರುಕಟ್ಟೆ ನೀತಿಗಳು ನಮ್ಮ ಮೂಲ ಕಸುಬು, ಆಹಾರ, ಸಾಂಸ್ಕೃತಿಕ ಬದುಕು, ಪರಂಪರೆ, ಮೌಲ್ಯಗಳನ್ನು ನುಂಗಿಹಾಕುತ್ತಿದೆ.
ಕಿಡಿ: ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅಪೌಷ್ಠಿಕತೆ, ಶಿಶುಮರಣದಂತಹ ಪ್ರಕರಣದಿಂದ ನಮ್ಮ ಜನಸಂಖ್ಯೆಯಲ್ಲಿ ಇಳಿಮುಖವನ್ನು ಕಾಣುತ್ತಿದ್ದೇವೆ. ನಮ್ಮ ಮಹಿಳೆಯರು ಮತ್ತು ಮಕ್ಕಳು ಅಪೌಷ್ಠಿಕತೆಯಿಂದ ರಕ್ತಹೀನತೆಯಿಂದ ಬಾಣಂತಿ, ಗರ್ಬಿಣಿಯ ಸಾವು ಹೆಚ್ಚಾಗುತ್ತಿದೆ. ವೈದಿಕ ಶಾಹಿಯ ಪರಿಣಾಮಗಳು ನಮ್ಮ ಬುಡಕಟ್ಟು ಸಂಸ್ಕೃತಿಯನ್ನು ಅಪಮೌಲ್ಯಗೊಳಿಸುತ್ತಿವೆ ಎಂದು ಕಿಡಿಕಾರಿದರು.
ಉಳಿವಿಗಾಗಿ ಜಾಥಾ: ನಮ್ಮ ಜೀವನಾಡಿಯಾಗಿರು ಕಾಡಿನಲ್ಲಿರುವ ಮೂಲ ನೆಲೆಗಳಿಂದಲೇ ಹೊರತಳ್ಳುವ ಪ್ರಯತ್ನ ನಡೆಯುತ್ತಿದೆ. ಹೊಸ ಕಾನೂನು ತಂದು ಒಕ್ಕಲೆಬ್ಬಿಸುವ ಮೂಲಕ ವಸತಿ ಹೀನರನ್ನಾಗಿ ಮಾಡುವ ಸಂಚನ್ನು ಸರ್ಕಾರಗಳು ರೂಪಿಸುತ್ತಿವೆ ಎಂದರು.
ಕಳೆದ 2 ವರ್ಷದಿಂದ ಪಶ್ಚಿಮಘಟ್ಟ ವ್ಯಾಪ್ತಿಯ 8 ಜಿಲ್ಲೆಯ ಅರಣ್ಯ ಮೂಲ ಬುಡಕಟ್ಟು ಸಮುದಾಯದವರು ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸಂಘಟಿತರಾಗುತ್ತಿದ್ದೇವೆ ಎಂದು ಅವರು ವಿವರಿಸಿದರು.
ಉತ್ತರ ಕನ್ನಡದ ಸಿದ್ಧಿ, ಶಿವಮೊಗ್ಗದ ಹಸಲರು, ಗೊಂಡ, ಉಡುಪಿ ಕೊರಗ, ಹಾಸನದ ಹಕ್ಕಿಪಿಕ್ಕಿ, ಮತ್ತುಮೇಧ, ಮೈಸೂರು, ಚಾಮರಾಜನಗರ ಜೇನುಕುರುಬ, ಬೆಟ್ಟದ ಕುರುಬ, ಸೋಲಿಗ ಸಮುದಾಯದವರು ಒಟ್ಟಿಗೆ ಸೇರಿ ಒಕ್ಕೂಟ ರಚಿಸಿ ಬುಡಕಟ್ಟು ಸಮುದಾಯಗಳ ಉಳಿವಿಗಾಗಿ ನಮ್ಮ ನಡೆ ಜಾಥಾ ಮಾಡಲಾಗುತ್ತಿದೆ.
ಜಾಗೃತಿ: ಅರಣ್ಯ ಹಕ್ಕಿನ ಸಮರ್ಪಕ ಅನುಷ್ಠಾನ, ಪೌಷ್ಠಿಕ ಆಹಾರ, ಗಿರಿಜನರ ಉಪಯೋಜನೆ ಕಾನೂನು. ಆಶ್ರಮ ಶಾಲೆಗಳ ಸುವ್ಯವಸ್ಥೆ, ಗುಣಮಟ್ಟದ ಶಿಕ್ಷಣ ಸೇರಿದಂತೆ ಹಲವಾರು ಬೇಡಿಕೆಗಳ ಒತ್ತಾಯಕ್ಕಾಗಿ ಜ. 28ರಂದು ಕುಪ್ಪಳ್ಳಿಯ ಕವಿಶೈಲದಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಉದ್ಘಾಟನೆ ನಡೆಸಿ, ವಿಧಾನಸೌಧದ ವರೆಗದೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡು ಸಭೆ, ಪ್ರತಿಭಟನೆ ಧರಣಿ  ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.     
ಪ್ರತಿಭಟನೆಯಲ್ಲಿ ಪಪಿತ್, ಅನಿಲ್, ತೀರ್ಥರಾಜ್, ಉದಯ ಕುಮಾರ್, ಐಕಟ್, ಪರಿಮಳ, ಬೇಬಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement