ಅಪಘಾತ: ಅಣ್ಣ-ತಂಗಿ ಸಾವು
ಚನ್ನರಾಯಪಟ್ಟಣ: ಲಾರಿ ಹಾಗೂ ಮೋಟಾರ್ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಚಲಿಸುತ್ತಿದ್ದ ಅಣ್ಣ ಮತ್ತು ತಂಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಇವರ ತಾಯಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆ ಬಳಿ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಮಳ್ಳೇನಹಳ್ಳಿ ಗ್ರಾಮದ ಮಂಜುನಾಥ್ (20), ಸ್ವಾತಿ (13) ಮೃತಪಟ್ಟ ದುರ್ದೈವಿಗಳಾಗಿದ್ದು, ಇವರ ತಾಯಿ ಶೋಭಾ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಂಜುನಾಥ್ ತನ್ನ ತಾಯಿ ಹಾಗೂ ತಂಗಿಯನ್ನು ತನ್ನ ಅಕ್ಕನ ಗ್ರಾಮ ಉಲಿವಾಲದಿಂದ ಮಳ್ಳೇನಹಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಚನ್ನರಾಯಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಇಂದು ಬೇಲೂರಿನ ಹಲವೆಡೆ ವಿದ್ಯುತ್ ವ್ಯತ್ಯಯ
ಬೇಲೂರು: ತಾಲೂಕಿನ ಇಬ್ಬೀಡು ಹಾಗೂ ಬಿಕ್ಕೋಡು ಮಾರ್ಗದ ಫೀಡರ್ಗಳಲ್ಲಿ 66 ಕೆವಿಎಸ್ ಎಂಟಿ ಪ್ರಸರಣ ಮಾರ್ಗದ ತಾಮ್ರದ ವಾಹಕವನ್ನು ಕಳಚುವ ಕೆಲಸವನ್ನು ಫೆ. 12 ರಂದು ಆರಂಭಿಸಲಿದ್ದು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಪಟ್ಟಣದ ನೆಹರೂ ನಗರ, ಹೊಸನಗರ, ಬಂಟೇನಹಳ್ಳಿ, ಶಾಂತಿನಗರ, ಪೊಲೀಸ್ ಕ್ವಾರ್ಟಸ್, ಚನ್ನಕೇಶವನಗರ, ಸನ್ಯಾಸಿಹಳ್ಳಿ, ಪ್ರಸಾದಿಹಳ್ಳಿ, ಹಿರಿಕೋಲೆ, ರಣಗಟ್ಟ, ಚನ್ನಾಪುರ. ಮಾವಿನಕೆರೆ. ಶ್ಯಾಮದೇವರ ಹಳ್ಳಿ, ನೆಟ್ಟಕೆರೆ, ಇಬ್ಬೀಡು, ಬಲ್ಲೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಶೈಕ್ಷಣಿಕ ಪ್ರಗತಿ ಸಾಧಿಸಲು ವಿದ್ಯಾರ್ಥಿಗಳಿಗೆ ಕರೆ
ಅರಸೀಕೆರೆ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕ ಸಮುದಾಯ ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ವಿದ್ಯಾಭ್ಯಾಸ ಮಾಡಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ ಕರೆ ನೀಡಿದರು. ಸಲಹೆ: ತಾಲೂಕಿನ ಕುರುವಂಕ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಬಿಸಿಯೂಟ, ಸಮವಸ್ತ್ರ, ವಿದ್ಯಾರ್ಥಿ ವೇತನ, ಕ್ಷೀರಭಾಗ್ಯ, ಸೈಕಲ್ ಹಾಗೂ ಪಠ್ಯಪುಸ್ತಕ ವಿತರಣೆ ಸೇರಿದಂತೆ ಸಕಲ ರೀತಿಯಲ್ಲಿಯೂ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಪೋಷಕರು ಹಾಗೂ ವಿದ್ಯಾರ್ಥಿ ಸಮುದಾಯ ಸರ್ಕಾರದ ಸೌಲಭ್ಯಗಳು ವಿಫಲವಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ರತ್ನಮ್ಮ ಗೋಪಾಲಸ್ವಾಮಿ, ತಾಪಂ ಸದಸ್ಯ ಲಕ್ಷ್ಮಣ್, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶಮೂರ್ತಿ, ಪಾಲ್ಗೊಂಡಿದ್ದರು. ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಹೆಚ್. ಕೃಷ್ಣನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾಲು ಬಾಯಿ ವಿರುದ್ಧ ಲಸಿಕೆ ಆಂದೋಲನ
ಹಾಸನ: ಕೇಂದ್ರ ಪುರಸ್ಕತ ಕಾಲು ಮತ್ತು ಬಾಯಿ ಜ್ವರ ರೋಗ ನಿಯಂತ್ರಣ ಯೋಜನೆಯಡಿ ಫೆಬ್ರವರಿ 15ರಿಂದ ಮಾರ್ಚ್ 14ರವರೆಗೆ ಜಿಲ್ಲೆಯಾದ್ಯಾಂತ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೋಗದ ವಿರುದ್ಧ ರೋಗ ನಿರೋಧಕ ಲಸಿಕೆ ಹಾಕುವ ಸಾಮೂಹಿಕ ಲಸಿಕೆ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರಿಗೆ ತಟ್ಟಿದ ಬ್ಯಾಂಕ್ ನೌಕರರ ಮುಷ್ಕರ
ಹಾಸನ: ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಕೈಗೊಂಡಿದ್ದ ಬ್ಯಾಂಕ್ಗಳ ಮುಷ್ಕರ ಮಂಗಳವಾರ ಸಹ ಮುಂದುರೆದಿದೆ. ನೌಕರರ ಮುಷ್ಕರದಿಂದ ಸಾರ್ವಜನಿಕರು ಎರಡನೇ ದಿನವು ಸಹ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ ಸೇರಿದಂತೆ ಅನೇಕ ರಾಷ್ಟ್ರೀಕೃತ ಬ್ಯಾಂಕ್ಗಳು ಇತರೆ ಬ್ಯಾಂಕ್ಗಳು ಕಾರ್ಯ ನಿರ್ವಹಿಸದ ಕಾರಣ ಗ್ರಾಹಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಎಟಿಎಂಗಳಲ್ಲಿ ಹಣ ಇಲ್ಲದ ಕಾರಣ ಗ್ರಾಹಕರು ಪರದಾಟ ಬೇಕಾಯಿತು. ಸಿಬ್ಬಂದಿಗಳು ಮುಷ್ಕರ ನಿರತರಾಗಿದ್ದರಿಂದ ಬಹುತೇಕ ಎಟಿಎಂಗಳಿಗೆ ಹಣ ತುಂಬಿರಲಿಲ್ಲ. ಸಾರ್ವಜನಿಕರು ಎಟಿಎಂಗಳಿಗೆ ಹೋಗಿ ಹಣ ಲಭ್ಯವಾಗದ ಕಾರಣ ನಿರಾಸೆಯಿಂದ ವಾಪಸ್ ಆದರು. ವೇತನ ಪರಿಷ್ಕರಣೆ ಕುರಿತಂತೆ ಭಾರತೀಯ ಬ್ಯಾಂಕ್ಗಳ ಸಂಘದ ಜೊತೆಗೆ ಸರ್ಕಾರ ನಡೆಸಿದ ಸಭೆ ವಿಫಲವಾಗಿದೆ.