ಗುರುವಿನ ಸೇವೆಯಿಂದ ಮೋಕ್ಷ: ಅರೆಮಾದನಹಳ್ಳಿ ಶ್ರೀ
ಅರಲಗೂಡು: ಭಾರತೀಯ ಸನಾತನ ಸಂಸ್ಕೃತಿಯ ನಿರ್ಮಾಣದಲ್ಲಿ ವಿಶ್ವ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರದುದು ಎಂದು ಅರೆಮಾದನಹಳ್ಳಿ ಮಠದ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ತಿಳಿಸಿದ್ದಾರೆ.
ತಾಲೂಕಿನ ಅರೆಮಾದನಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಸುಜ್ಞಾನಪ್ರಭು ಭಗವದ್ಪಾದಂಗಳವರ ಜಯಂತಿ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಮಠಗಳು ಸಮಾಜದೊಂದಿಗೆ ಜತೆಗೂಡಿ ಕೆಲಸ ನಿರ್ವಹಿಸುತ್ತಿದ್ದು, ಇದು ಕೇವಲ ಸೀಮಿತವಾಗಿರದೇ ವಿಶಾಲತೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದ ಅವರು, ನಾಡಿಗೆ ವಿಶ್ವಕರ್ಮ ಸಮಾಜ ಅತ್ಯಂತ ಅವಿಸ್ಮರಣೀಯ ಕೊಡುಗೆ ನೀಡಿದೆ. ಧರ್ಮಕಾರ್ಯಗಳು ನಡೆಯುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸುವ ಜತೆಗೆ ವೈರತ್ವ ದೂರವಾಗುತ್ತದೆ. ಇತ್ತೀಚೆಗೆ ಸಮುದಾಯದವರು ಬೇಧ ಭಾವವಿಲ್ಲದೇ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಸಮಾಜದ ಶ್ರೇಯೋಭಿವೃದ್ಧಿಗೆ ಕೈಜೋಡಿಸುತ್ತಿರುವುದು ಸಂತೋಷದಾಯಕ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಜಮಖಂಡಿ ಜೆಡಿಪಿಐ ಮಂಟೇಲಿಂಗಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶವನ್ನು ಆಳುವ ಸಾಮರ್ಥ್ಯ ಈ ಸಮಾಜಕ್ಕಿದೆ. ವಿಶ್ವಕರ್ಮರು ಯಾರ ಹಂಗಿನಲ್ಲೂ ಬದುಕದೇ ಸ್ವಾವಲಂಬಿಯಾಗಿ ಜೀವಿಸುವ ಶಕ್ತಿ ಹೊಂದಿದ್ದಾರೆ. ರಾಜಕೀಯವಾಗಿ ಪ್ರಾತಿನಿಧ್ಯ ಸಿಗಬೇಕಾದರೆ ವಿಶ್ವಕರ್ಮರು ಸಂಘಟನಾಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಸವತ್ತೂರು ಸಿದ್ದಲಿಂಗೇಶ್ವರ ವಿರಕ್ತ ಮಠದ ಬಸವರಾಜೇಂದ್ರ ಸ್ವಾಮೀಜಿ, ಸಿಂದಗಿ ತಾಲ್ಲೂಕು ತಿಳಿಗೊಳ ಬ್ರಹ್ಮ ವಿದ್ಯಾಶ್ರಮದ ಮಹೇಶ್ವರಾನಂದಜೀ, ಜ್ಞಾನ ಭಾಸ್ಕರ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಪೋಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆ. ವಾಸುದೇವ್, ಸಮಾಜ ಸೇವಕ ವೀರಬ್ರಹೇಂದ್ರ ಶರ್ಮ, ಮೂಡಿಗೆರೆ ರತ್ನಾಕರ, ಹಾಸನದ ಗಣೇಶಾಚಾರ್, ಉಡುಪಿ ಕೃಷ್ಣಯ್ಯಶೆಟ್ಟಿ, ಅರವಿಂದ ಪತ್ತಾರ್, ತಮಿಳುನಾಡು ನೆಲ್ಲೂರು ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಗುಡಿಯತ್ತಮ್ ರಾಜೇಂದ್ರಾಚಾರ್, ಜಿಲ್ಲಾ ಮರಗೆಲಸ ಕೆಲಸಗಾರರ ಸಂಘದ ಅಧ್ಯಕ್ಷ ನಿಂಗರಾಜಾಚಾರ್, ಮದುರೈ ವಕೀಲ ಎ. ಸೆಂದಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸೇವಾರತ್ನ ಪ್ರಶಸ್ತಿಯ ಗೌರವ: ಗೋಕಾಕ್ ಡಾ. ಜಯಂತರಾವ್ ಹನುಮಂತರಾವ್ ಸೋನಾರ್ ಅವರಿಗೆ ವೈದ್ಯ ಸೇವಾ ರತ್ನ, ವಿಜಾಪುರದ ನಾಗರಾಜ ಗಂಗಾಧರ ಪತ್ತಾರ್, ಗುಲ್ಬರ್ಗದ ಮಂಜುನಾಥ ಮಲ್ಲಿಕಾರ್ಜುನ ಕಮ್ಮಾರ ಅವರಿಗೆ ಗುರು ಸೇವಾ ಧುರೀಣ ಹಾಗೂ ಜಮಖಂಡಿ ಇಂಜಿನಿಯರ್ ವಿ.ಎ. ಗೌಡರ್, ಬನಹಟ್ಟಿ ಮೋಹನ್ ಪತ್ತಾರ್, ಗೋಕಾಕ್ ಅಶೋಕ್ ಈರಪ್ಪ ಚಿಪ್ಪಲಕಟ್ಟಿ, ಬಿ.ಐ. ಬಡಿಗೇರ್, ಮೌನೇಶ್ ವೀರಪ್ಪ ಪತ್ತಾರ್, ವಿಜಾಪುರ ಈರಣ್ಣ ಗುರುಬಾಳಪ್ಪ ಪತ್ತಾರ್, ಶಿವಮೊಗ್ಗದ ಟಿ.ಆರ್. ಸತ್ಯನಾರಾಯಣ, ಹೊಸೂರು ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಮುಂತಾದವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.