ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ನಲ್ಲಿ ಹಣ ಮೀಸಲಿಡಿ
ಹಾಸನ: ನಗರದ ಹೊಸ ಬಸ್ ನಿಲ್ದಾಣಕ್ಕೆ ಹೋಗಿ ಬರಲು ರಸ್ತೆ, ಮೇಲ್ಸೇತುವೆ, ನಿರ್ಮಾಣ, ಜಿಲ್ಲೆಯ ಎಲ್ಲಾ ರಸ್ತೆಗಳ ದುರಸ್ತಿ, ಕುಡಿಯುವ ನೀರು ಇನ್ನಿತರೆ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯ ಅಭಿವೃದಿಗೆ ಬಜೆಟ್ನಲ್ಲಿ ಹಣ ಮೀಸಲಿರಿಸುವಂತೆ ಒತ್ತಾಯಿಸಿ, ಸಿಪಿಎಂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಎನ್.ಆರ್. ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಪ್ರತಿಭಟನಾ ಸಭೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕ್ರಮ ಕೈಗೊಳ್ಳುತ್ತಿಲ್ಲ: ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಆಡಳಿತಾರೂಢ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ ಆಯ್ಕೆಯಾದ ಯಾವದೇ ಜನಪ್ರತಿನಿಧಿಗಳೂ ಕೂಡ ಈ ಸಮಸ್ಯೆಗಳ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ಧ್ವನಿ ಎತ್ತದೆ ಸಮಸ್ಯೆಗಳಿಗೆ ಪರಿಹಾರ ಸಿಗದೆ ಜನರು ಪರಿತಪಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರವಾಗಲೀ, ಜಿಲ್ಲಾಡಳಿತವಾಗಲೀ ಇತ್ತ ಕಡೆ ಗಮನ ಹರಿಸದೆ, ಜಿಲ್ಲೆಯ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹೆಸರಿಗಷ್ಟೇ ಜಿಲ್ಲೆಯ ಉಸ್ತುವಾರಿಗಳಾಗಿದ್ದಾರೆ. ಜಿಲ್ಲೆಗೆ ಕಾಲಕಾಲಕ್ಕೆ ಭೇಟಿ ನೀಡಿ ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವೇಕಯುತ ನಿರ್ಮಾಣವಲ್ಲ: ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ, ಹಾಸನ ನಗರದ ಚನ್ನಪಟ್ಟಣ ಕೆರೆ ಪ್ರದೇಶದಲ್ಲಿ ನೂತನವಾಗಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿದ್ದು ವಿವೇಕಯುತ ತೀರ್ಮಾನವಾಗಿರಲಿಲ್ಲ. ಅಲ್ಲಿಗೆ ಹೋಗಿ ಬರಲು ಸರಿಯಾದ ರಸ್ತೆ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸದೆ, ಏಕಾಏಕಿ ಬಸ್ ನಿಲ್ದಾಣ ನಿರ್ಮಿಸಿ, ಬಲವಂತವಾಗಿ ಬಸ್ ನಿಲ್ದಾಣ ಸ್ಥಳಾಂತರಿಸಲಾಯಿತು. ಅದರಿಂದಾಗಿ ಇಂದು ಪ್ರತಿನಿತ್ಯ ಪ್ರತಿಕ್ಷಣ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅತ್ಯಂತ ಅಪಾಯಕರ ಹಾಗೂ ಅತ್ಯಂತ ದುರ್ಗಮವಾದ ರಸ್ತೆಯಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.
ಒತ್ತಾಯ: ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಬಗೆಗೂ ಸಹ ಸರ್ಕಾರ ಗಮನ ಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಹೊಸ ಬಸ್ನಿಲ್ದಾಣಕ್ಕೆ ಹೋಗಿ ಬರಲು ರಸ್ತೆ, ಮೇಲ್ಸೇತುವೆ ನಿರ್ಮಿಸಲು, ಜಿಲ್ಲೆಯ ಎಲ್ಲಾ ರಸ್ತೆ, ಕುಡಿಯುವ ನೀರು ಇನ್ನಿತರೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಅಭಿವೃದಿಗೆ ಬಜೆಟ್ನಲ್ಲಿ ಹಣ ಮೀಸಲಿರಿಸುವಂತೆ ಒತ್ತಾಯಿಸಿದರು.
ಎಚ್ಚರಿಕೆ: ಹಾಸನ ನಗರದ ಹಳೇ ಬಸ್ ನಿಲ್ದಾಣವನ್ನು ಶೀಘ್ರ ನವೀಕರಿಸಿ ನಗರ ಮತ್ತು ಗ್ರಾಮಾಂತರ ಸಾರಿಗೆಗೆ ಮೀಸಲಿರಿಸಬೇಕು. ಸರ್ಕಾರ ಈಗಲಾದರೂ ಹಾಸನ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಬಜೆಟ್ನಲ್ಲಿ ಹಣ ಮೀಸಲಿರಿಸಿ ಶೀಘ್ರ ಕಾಮಗಾರಿ ಆರಂಭಿಸದಿದ್ದರೆ ಜಿಲ್ಲೆಯ ಜನರ ಆಕ್ರೋಶವನ್ನು ಸರ್ಕಾರ ಖಂಡಿತವಾಗಿಯೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಿಪಿಎಂ ಜಿಲ್ಲಾ ಮುಖಂಡ ಧರ್ಮೇಶ್, ಪ್ರಜಾವೇದಿಕೆ ಸಂಚಾಲಕ ವೈ.ಎಸ್. ವೀರಭದ್ರಪ್ಪ, ಸಮೀರ್ ಅಹಮದ್, ರೈತ ಮುಖಂಡ ಎಚ್.ಆರ್. ನವೀನ್ ಕುಮಾರ್, ಯುವಜನ ಮುಖಂಡ ಶಾವೆಲ್ ಹಮೀದ್, ವಿದ್ಯಾರ್ಥಿ ಮುಖಂಡ ಅಂಶದ್, ಅರವಿಂದ್ ಹಾಗೂ ಇತರರು ಇದ್ದರು.