ಬ್ರಾಡ್ಗೇಜ್ ಮಾರ್ಗ ರದ್ದುಗೊಳಿಸಲು ಆಗ್ರಹ
ಹಾಸನ: ಚಿಕ್ಕಮಗಳೂರು- ಸಕಲೇಶಪುರ ಹೊಸ ಬ್ರಾಡ್ಗೇಜ್ ರೇಲ್ವೆ ಮಾರ್ಗ ಯೋಜನೆ ಬದಲಾವಣೆಯನ್ನು ರದ್ದುಪಡಿಸಿ, 15 ವರ್ಷಗಳ ಹಿಂದೆ ಸರ್ವೆ ಮಾಡಿ ರೂಪಿಸಿದ್ದ ಯೋಜನೆಯನ್ನೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮನವಿ ನೀಡಿದರು.
ಆರೋಪ: ರೇಲ್ವೆ ಇಲಾಖೆಯು ಚಿಕ್ಕಮಗಳೂರು- ಸಕಲೇಶಪುರ ಹೊಸ ಬ್ರಾಡ್ಗೇಡ್ ರೇಲ್ವೆ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ 15 ವರ್ಷಗಳ ಹಿಂದೆ ಚಿಕ್ಕಮಗಳೂರು-ಸಕಲೇಶಪುರದವರೆಗೆ ಸರ್ವೆ ಮಾಡಿ ನಕಾಶೆಯನ್ನು ಸಿದ್ಧಪಡಿಸಿ ಹಾಗೂ ಯೋಜನೆಯನ್ನು ರೂಪಿಸಿ ಸಂಬಂಧಿಸಿದ ಇಲಾಖೆಯವರು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸರ್ವೆ, ನಕ್ಷೆ ಮತ್ತು ರೂಪಿಸಿದ ಯೋಜನೆಯಿಂದ ಬಡವರು, ದಲಿತರ ಜಮೀನುಗಳಿಗೆ ಮತ್ತು ಮನೆಗಳಿಗೆ ಯಾವುದೇ ರೀತಿಯ ತೊಂದರೆಗಳಾಗಿರುವುದಿಲ್ಲ. ಆದರೇ ಇತ್ತಿಚಿಗೆ 2013ನೇ ಸಾಲಿನಲ್ಲಿ ರೈಲ್ವೆ ಇಲಾಖೆಯವರು ಹಿಂದಿನ ನಕ್ಷೆ ಕೈಬಿಟ್ಟು ಶ್ರೀಮಂತರ ಜಮೀನು, ಮನೆಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ವಿಶೇಷವಾಗಿ ಐಬಿಸಿ ಎಸ್ಟೇಟ್ ಜಮೀನು ಮತ್ತು ಬಂಗಲೆಯನ್ನು ರಕ್ಷಿಸುವ ಉದ್ದೇಶದಲ್ಲಿ ಕೆಲ ರಾಜಕೀಯ ನಾಯಕರ ಮತ್ತು ಅಧಿಕಾರಿಗಳ ಪ್ರಭಾವದೊಳಗೆ ಹೊಸ ಸರ್ವೆ ಮಾಡಲಾಗಿದೆ ಎಂದು ಆರೋಪಿಸಿದರು.
ಜಮೀನಿಗೆ ತೊಂದರೆ: ಈ ಹೊಸ ಯೋಜನೆಯಿಂದ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದ ಸರ್ವೇ ನಂ.36ರಲ್ಲಿ ಇರುವ 20 ದಲಿತರ ಮನೆಗಳು ಮತ್ತು 15 ಎಕರೆ ದಲಿತ ಜಮೀನು, ಮತ್ತಾವರ ಗ್ರಾಮದ ಸರ್ವೇ ನಂ.13,10, 7, 53, 152, 155, 79, 72 ರಲ್ಲಿ ಇರುವ 40 ದಲಿತರ ಮನೆಗಳು ಮತ್ತು 25 ಎಕರೆ ದಲಿತರ ಜಮೀನು, ಕಸಬಾ ಹೋಬಳಿಯ ಕೆರಲೂರು ಗ್ರಾಮದ 20 ದಲಿತರ ಮನೆಗಳು ಮತ್ತು 15 ಎಕರೆ ದಲಿತರ ಜಮೀನು, ಬಿಕ್ಕೋಡು ಹೋಬಲಿಯ ಲಕ್ಕುಂದ ಗ್ರಾಮದ ಹಿಂದುಳಿದ ವರ್ಗದವರ ಮತ್ತು ಅಲ್ಪಸಂಖ್ಯಾತರ ಸುಮಾರು 30 ಎಕರೆ ಜಮೀನು ಮತ್ತು ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಲಕ್ಕುಂದ- ಸುಂಡಳ್ಳಿ ಗ್ರಾಮದ 20 ದಲಿತರ ಮತ್ತು ಹಿಂದುಳಿದ ವರ್ಗದವರ ಮನೆಗಳು ಮತ್ತು 25 ಎಕರೆ ದಲಿತರ ಮತ್ತು ಹಿಂದುಳಿದವರ ಜಮೀನಿಗೆ ತೊಂದರೆ ಉಂಟಾಗಿದೆ ಎಂದರು.
ಒತ್ತಾಯ: ಇಂತಹ ಕೆಲಸದಿಂದ ಬಡವರು, ದಲಿತರು ಸೇರಿದಂತೆ ಇತರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೇಲ್ವೆ ಯೋಜನೆಯಲ್ಲಿ ರೂಪಿಸಿದ ಮಾರ್ಗವನ್ನು ಬದಲಾಯಿಸಿ 2013ನೇ ಸಾಲಿನಲ್ಲಿ ಹೊಸದಾಗಿ ಸರ್ವೆ ಮಾಡಿರುವುದನ್ನು ರದ್ದುಪಡಿಸಿ, 15 ವರ್ಷಗಳ ಹಿಂದೆ ರೇಲ್ವೆ ಅಧಿಕಾರಿಗಳು ಸರ್ವೆ ಮಾಡಿ ನಕ್ಷೆ ತಯಾರಿಸಿದ ಮಾರ್ಗ ಗುರುತಿಸಿ ರೂಪಿಸಿರುವ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಬಿ.ಪಿ. ಮಂಜೇಗೌಡ, ಕೆ. ಈಶ್ವರಪ್ಪ, ವಕೀಲರಾದ ಅರೆಹಳ್ಳಿ ರಾಜು, ನಾಗರಾಜಜ್ಹೆತ್ತೂರ್, ಮಲ್ಲೇಶ್ ಅಂಬುಗ ಹಾಗೂ ಇತರರು ಇದ್ದರು.