ಮನಸೂರೆಗೊಂಡ ಸಂಭವನಾಥ ಜನ್ಮ ಕಲ್ಯಾಣ ನಾಟಕ
ಬೇಲೂರು: ಜೈನ ಸಮುದಾಯದ ಉದ್ಯಮಿಗಳು ಅಭಿನಯಿಸಿದ ಶ್ರೀ ಸಂಭವನಾಥರ ಜನ್ಮ ಕಲ್ಯಾಣಾ ಕಲಾ ವೈಭವದ ನಾಟಕವನ್ನು ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಪಟ್ಟಣದ ದೇವಾಂಗ ಬೀದಿಯಲ್ಲಿ ನಿರ್ಮಿಸಿರುವ ಶ್ರೀ ಸಂಭವನಾಥ ಜೈನ್ ಶ್ವೇತಾಂಬರ ದೇವಸ್ಥಾನ ಉದ್ಘಾಟನೆಯ ಹಿನ್ನೆಲೆಯಲ್ಲಿ 2 ದಿನದ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಜೈನ್ ಉದ್ಯಮಿಗಳೇ ಸೇರಿ ಅಭಿನಯಿಸಿದ ಸಂಭವನಾಥರ ಜನ್ಮ ಕಲ್ಯಾಣಾ ನಾಟಕ ನೋಡುಗರ ಮನಸೂರೆಗೊಂಡಿತು. ವೀರಶೈವ ಸಮುದಾಯ ಭವನದಲ್ಲಿ ಕಳೆದ 3 ದಿನದಿಂದ ಜೈನ ಸಂಸ್ಕೃತಿಯನ್ನು ಸಾರದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎಲ್ಲಾ ಭಾಗದಿಂದ ಬಂದಿರುವ ಜೈನ ಧರ್ಮೀಯರ ಪೂಜ್ಯ ಆಚಾರ್ಯರು, ಬಂಧು ಮಿತ್ರರು ಸಡಂಗ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ.
ಪಟ್ಟಣದ ಚಿನ್ನಾಭರಣ, ಹಾರ್ಡ್ವೇರ್, ಬಟ್ಟೆ ಅಂಗಡಿ ಹಾಗೂ ನಾನಾ ಉದ್ಯಮಿಗಳಾದ ಕೇವಲ್ ಚಂದ್ ಪುಷ್ಪಬಾಯಿ, ಮನೋಜ್ ಸಂಗೀತಾ, ನವರತ್ನಮಾಲಾ ಭಾಗ್ಯವಂತಿ, ಜವೇರಿಲಾಲ್ ಪತ್ರಗಳನ್ನು ಮಾಡಿದ್ದು ಬೆಂಗಳೂರಿನ ಪ್ರತಿಷ್ಠಾನಾಚಾರ್ಯ ಶಾಲೆಯವರು ಕಾರ್ಯಕ್ರಮ ಆಯೋಜಿಸಿದ್ದರು.
14ರಂದು ಲೋಕಾರ್ಪಣೆ
ಇಲ್ಲಿನ ದೇವಾಂಗ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಂಭವನಾಥ ಜೈನ್ ಶ್ವೇತಾಂಬರ ದೇವಸ್ಥಾನವನ್ನು ಫೆ. 14ರ ಶುಕ್ರವಾರ ಲೋಕಾರ್ಪಣೆಗೊಳಿಸಲಾಗುವುದು. ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಶ್ರೀ ಆಚಾರ್ಯ ಆಶೋಕರತ್ನ ಸುರಜೀ ಸಾನಿಧ್ಯ ವಹಿಸಲಿದ್ದಾರೆ ಎಂದು ಶ್ರೀ ಸಂಭವನಾಥ ಜೈನ್ ಶ್ವೇತಾಂಭರ ಸಂಘದ ಸದಸ್ಯರು ತಿಳಿಸಿದ್ದಾರೆ.