ಶಿಕ್ಷಣ ಕೇವಲ ಓದಿಗೆ ಸೀಮಿತವಾಗಬಾರದು
ಹಾಸನ: ಶಿಕ್ಷಣವೆಂಬುದು ಕೇವಲ ಓದುವಿಕೆ ಮಾತ್ರ ಸೀಮಿತವಾಗದೆ ಮಕ್ಕಳ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಯಾಗಬೇಕು ಎಂದು ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯ ಕಾರ್ಯದರ್ಶಿ ಗಂಗಾಧರ ತಿಳಿಸಿದ್ದಾರೆ.
ಹಾಸನದ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ನಡೆದ ಟೈಮ್ಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಎಲ್ಲಾ ರಂಗಗಳಲ್ಲೂ ಸಜ್ಜುಗೊಳಿಸುವ ದೃಷ್ಟಿಯಿಂದ ಪೋಷಕರು ಹಾಗೂ ಶಿಕ್ಷಕರು ಕ್ರಮ ವಹಿಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಉಷಾ ಎಸ್. ಪಾಟೀಲ್ ಮಾತನಾಡಿ, ಮಕ್ಕಳನ್ನು ಬೌದ್ಧಿಕವಾಗಿ ಮಾತ್ರವಲ್ಲದೆ ಕ್ರೀಡಾ ಹಾಗೂ ಸಾಂಸ್ಕತಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ಶಾಲಾ ಸಂಸ್ಥೆಗಳು ರೂಪುರೇಷೆ ಸಿದ್ಧಪಡಸಿಕೊಳ್ಳಬೇಕು ಎಂದರು. ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳು ಪಥಸಂಚಲನ ನಡೆಸಿದರು ಹಾಗೂ ಕ್ರೀಡಾಕೂಟದ ನಿಯಮಗಳ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಆರ್.ಪಿ. ವೆಂಕಟೇಶ್ ಮೂರ್ತಿ, ರವಿ ನಾಕಲಗೂಡು, ಆಲೂರು ಠಾಣಾ ಪಿ.ಎಸ್.ಐ. ಸರೋಜ ಪ್ರಕಾಶ್, ಟೈಮ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಂದ್ರಕುಮಾರ್ ಹಾಗೂ ಇತರರು ಇದ್ದರು.