ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಿಕ್ಷಣ ವಂಚಿತ ಮಕ್ಕಳಿಂದಲೇ ಅಪರಾಧ'

Srinivasa Murthy VN
Updated On : 12 Feb 2014, 12:57 pm

ಹೊಳೆನರಸೀಪುರ: ಪರಿಪೂರ್ಣ ಶಿಕ್ಷಣದಿಂದ ವಂಚಿತವಾದ ಮಕ್ಕಳಿಂದಲೇ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಅನೇಕ ಸಮಾಜಘಾತುಕ ಘಟನೆಗಳು ಸಂಭವಿಸಲು ಕಾರಣವಾಗುತ್ತಿರುವ ಉದಾಹರಣೆಗಳು ಆತಂಕಕಾರಿ ಬೆಳವಣಿಗೆಯಾಗಿವೆ ಎಂದು ಇಲ್ಲಿನ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಎನ್. ದೇವೇಗೌಡ (ಪಾಪಣ್ಣಿ) ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಸೊಮವಾರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದ ಭವಿಷ್ಯದ ಪ್ರಜೆಗಳನ್ನು ಪ್ರಜ್ಞಾವಂತರಾಗಿ ರೂಪಿಸಬೇಕಾದ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ತಾಯಿಯ ಎದೆಹಾಲು ಮಗುವಿಗೆ ಸರಿಯಾದ ಸಮಯದಲ್ಲಿ ದೊರೆಯದಿದ್ದಾಗ ಆ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಆಗುವ ರೀತಿಯಲ್ಲಿ, ಪ್ರಾಥಮಿಕ ಹಂತದ ಶಾಲೆಗಳ ಶಿಕ್ಷಕರು  ತಮ್ಮ ಜವಾಬ್ದಾರಿ ಹಾಗು ಹೊಣೆಯನ್ನರಿತು ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದಲ್ಲಿ ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಅವರ ಭವಿಷ್ಯದ ಮೇಲೆ ಕರಾಳ ಛಾಯೆ ಮೂಡಲಿದೆ ಎಂದರು.
ಕಳ್ಳರಿಗೆ ಸರ್ಕಾರದಿಂದಲೇ ಅನುಕೂಲ: ಸರ್ಕಾರ ಪ್ರಾಥಮಿಕ ಹಂತದ ಶಿಕ್ಷಣದ ಪ್ರಗತಿಗಾಗಿ ಕೋಟಿಗಟ್ಟಲೇ ಹಣವನ್ನು ನೀಡುತ್ತಿದೆ. ಆದರೆ, ಇಂದು ಪ್ರಾಥಮಿಕ ಹಂತದಲ್ಲಿನ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಆತಂಕ ವ್ಯಕ್ತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂದು ರಾಗಿ ಬೆಳೆದ ರೈತನಿಗೆ ರು. 1800 ಬೆಂಬಲ ಬೆಲೆಯನ್ನು ನೀಡುವ ಅದೇ ಸರ್ಕಾರ ರಾಜ್ಯದಲ್ಲಿನ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಕ್ವಿಂಟಾಲ್ ರಾಗಿಗೆ ರು. 3000ಗಳನ್ನು ನಿಗದಿಗೊಳಿಸಿದೆ. ಸರ್ಕಾರದ ಹಣ ಮಕ್ಕಳ ಶ್ರೇಯೋಭಿವೃದ್ಧಿಗೆ ತಲುಪದೇ, ಅಧಿಕಾರಿಗಳು ಹಾಗೂ ಕಳ್ಳಕಾಕರ ಪಾಲಾಗಲು ಸರ್ಕಾರವೇ ಅನುವು ಮಾಡಿಕೊಟ್ಟಿದೆ ಎಂದು ಅವರು ಟೀಕಿಸಿದರು.
ಕಾರ್ಯಾಗಾರದಲ್ಲಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕದ ವತಿಯಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಹೊಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಟಿ. ಪುಟ್ಟರಾಜು, ಎನ್.ಕೆ. ಶಿವರಾಜು ಹಾಗೂ ಕೆ. ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವಿಕೆಯ ಕುರಿತಂತೆ ತಾಲೂಕಿನ ದೊಡ್ಡಕುಂಚೆ ನವೋದಯ ಪ್ರೌಢಶಾಲೆಯ ಸಂಪನ್ಮೂಲ ಶಿಕ್ಷಕರಾದ ಮಂಜಪ್ಪ ಅವರಿಂದ ಪ್ರಧಾನ ಭಾಷಣ ನೆರವೇರಿತು.
ಡಯಟ್ ಪ್ರಾಂಶುಪಾಲೆ ಪಿ. ಪದ್ಮಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಶಿವಮಾದಪ್ಪ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕುಮಾರ್, ಕೆಜಿವಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್.ದಿವಾಕರ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಸುಜಾತ್ ಆಲಿ, ಕೆ. ಶಿವಕುಮಾರಾಚಾರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement