ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚುನಾವಣೆ ಎದುರಿಸಲು ತೃತೀಯ ರಂಗದ ಚಿಂತನೆ

Srinivasa Murthy VN
Updated On : 15 Feb 2014, 9:55 am

ಚನ್ನರಾಯಪಟ್ಟಣ: ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 12 ಪ್ರಾದೇಶಿಕ ಪಕ್ಷಗಳು ಸೇರಿ ತೃತೀಯ ರಂಗ ರಚಿಸಿ ಚುನಾವಣೆಯನ್ನು ಎದುರಿಸುವ ಚಿಂತನೆ ನಡೆದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ತಾಲೂಕಿನ ಆನೆಕೆರೆ ಗ್ರಾಮದಲ್ಲಿ 21 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ದೇಶದ ಜನತೆ ಕಾಂಗ್ರೆಸ್ ಮತ್ತು ಬಿಜೆಪಿ ಅವಕಾಶ ಕೊಟ್ಟು ನೋಡಿದ್ದು, ಇವರಿಂದ ಅಭಿವೃದ್ಧಿ ಕಾಣದ ಕಾರಣ ಜನತೆ ಸ್ಥಳೀಯ ಪಕ್ಷಗಳಿಂದ ಅಭಿವೃದ್ಧಿಯನ್ನು  ಎದುರು ನೋಡುತ್ತಿದ್ದು, 12 ಪ್ರಾದೇಶಿಕ  ಪಕ್ಷಗಳು ಸೇರಿ ತೃತೀಯ ರಂಗ ರಚಿಸಿಕೊಂಡು ಚುನಾವಣೆ ಎದುರಿಸುವ ಚಿಂತನೆ ನಡೆಸಿ, 12 ಪಕ್ಷದ ನಾಯಕರು ಚರ್ಚೆ ಮಾಡಲು ಫೆ. 25ರಂದು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
12 ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿ  ಚುನಾವಣೆ ಎದುರಿಸಿದರೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಾಣುತ್ತಿದ್ದು, ದೇಶದ ಅಭಿವೃದ್ಧಿಗೆ ಶ್ರಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು  ತಿಳಿಸಿದರು.
ಉತ್ತಮ ಅವಕಾಶ: ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯವನ್ನು ತೃತೀಯ ರಂಗ ರಚನೆ ಮಾಡಲು ಹೊರಟಿರುವ ನಾಯಕರು ವ್ಯಕ್ತಪಡಿಸಿದ್ದು, ತೃತೀಯ ರಂಗ ರಚನೆ ಸಂದರ್ಭದಲ್ಲಿ ತಮಗೆ ಉತ್ತಮ ಅವಕಾಶ ನೀಡುವುದಾಗಿ ಒಪ್ಪಿದ್ದಾರೆ ಎಂದು ತಿಳಿಸಿದರು. ತೃತೀಯ ರಂಗದಲ್ಲಿ ತಾವು ನಾಯಕತ್ವ ವಹಿಸಲು, ರಾಜ್ಯದಿಂದ 14ರಿಂದ 15 ಸ್ಥಾನಗಳನ್ನು ಲೋಕಸಭೆಗೆ ನೀಡಿದರೆ ನೈತಿಕ ಬಲ ಸಿಗುತ್ತದೆ. ಈ ನಿಟ್ಟಿನಲ್ಲಿ ಜನತೆ ಚಿಂತಿಸಬೇಕಿದೆ ಎಂದು ತಿಳಿಸಿದರು.  ಫೆ. 25ರಂದು 12 ಪಕ್ಷಗಳ ಮುಖಂಡರ ಕರೆದಿರುವ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಲೋಕಸಭಾ ಚುನಾವಣೆ ಎದುರಿಸುವ ತಂತ್ರಗಾರಿಕೆಯನ್ನು ರೂಪಿಸುವ ಸಂಬಂಧ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಟೆಂಡರ್: ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಜಿಲ್ಲೆಯ ಅಭಿವೃದ್ಧಿಗೆ ತಾವು ಹೆಚ್ಚು ಗಮನ ಹರಿಸುತ್ತಿದ್ದು, ರೈತರಿಗೆ ಅನುಕೂಲ ಕಲ್ಪಿಸಲು ಡೈರಿಯ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. 22 ಕೋಟಿ ರು. ವೆಚ್ಚದಲ್ಲಿ ಡೈರಿ ಕಟ್ಟಡ ಅಭಿವೃದ್ಧಿಪಡಿಸಿರುವ ಜತೆಗೆ 32 ಕೋಟಿ ರು. ವೆಚ್ಚದಲ್ಲಿ ಹೊಸ ಯುನಿಟ್ ತೆರೆಯುವ ಸಂಬಂಧ ಟೆಂಡರ್ ಕರೆಯಲಾಗಿದೆ ಎಂದರು. ತಮ್ಮ ಹೊಳೆನರಸೀಪುರ ಕ್ಷೇತ್ರದ ವ್ಯಾಪ್ತಿಯಲ್ಲಿ 36 ಕೋಟಿ ವೆಚ್ಚದಲ್ಲಿ ದೊಡ್ಡಕುಂಚೆ- ಕಾರೇಕೆರೆ ಮಾರ್ಗವಾಗಿ ಹೆರಗುವರಗೆ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜನಿಯರ್ ಚರವಣನವರ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜನಿಯರ್ ಪುಟ್ಟಮಲ್ಲಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement