ದೇವರಿಗೇ ಮಾಟ ಮಾಡಿಸಬಲ್ಲ ಪ್ರಾಣಿ ಮನುಷ್ಯ
ಅರಸೀಕೆರೆ: ಪವಾಡಗಳು ನಿಜವಲ್ಲ, ಇದು ಕೇವಲ ಒಂದು ತಂತ್ರ. ತಮ್ಮ ಸ್ವಾರ್ಥ ಸಾಧನೆಗಾಗಿ ದೇವರಿಗೂ ಮಾಟ ಮಾಡಿಸುವಂತಹ ಪ್ರಾಣಿ ಇದೆ ಎಂದರೆ ಅದು ಮನುಷ್ಯ ಮಾತ್ರ ಎಂದು ಪವಾಡ ಬಯಲು ರಹಸ್ಯ ಖ್ಯಾತಿಯ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಶಾಂತಿನಿಕೇತ ಪಬ್ಲಿಕ್ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ನಿಮ್ಮ ನಡುವೆ ಭಯೋತ್ಪಾದಕರಿದ್ದಾರೆ ಎಂದರೆ ಅದು ಮಾಟ ಮಂತ್ರಗಳನ್ನು ಮಾಡಿ ಜನರನ್ನು ಭಯದ ವಾತಾವರಣದಲ್ಲಿದ್ದು ಹಣ ಮಾಡುವ ದಂಧೆಗಿಳಿದಿರುವವರು ಎಂದು ತಿಳಿಸಿದರು.
ವಿಷಾದ: ಧರ್ಮದ ಹೆಸರಿನಲ್ಲಿ ಅಧರ್ಮ, ಸತ್ಯದ ಹೆಸರಿನಲ್ಲಿ ಅಸತ್ಯ, ನಂಬಿಕೆಯ ಹೆಸರಿನಲ್ಲಿ ಅಪನಂಬಿಕೆಗಳು ಹೆಚ್ಚುತ್ತಿದ್ದು ಧಾರ್ಮಿಕತೆ ಎನ್ನುವುದು ಮಾರುಕಟ್ಟೆಯ ಸರಕಾಗಿದೆ. ಹಿಂದಿನ ಕಾಲದಲ್ಲಿ ಧಾರ್ಮಿಕತೆಯಲ್ಲಿ ಮಾನವ ಮೌಲ್ಯಗಳನ್ನು ಕಾಣಬಹುದಿತ್ತು. ಆದರೆ ಇಂದು ಜನರ ನಂಬಿಕೆ ಹಾಗೂ ಮೌಢ್ಯತೆಯನ್ನು ಬಳಸಿಕೊಂಡು ಮಾಟ ಮಂತ್ರಗಳ ಹೆಸರಿನಲ್ಲಿ ಅಬಲೆಯರನ್ನು, ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ದೂರು: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಬದುಕಿಗೆ ಬೇಕಾದ ವಿದ್ಯಾಭ್ಯಾಸ ದೊರೆಯುತ್ತಿಲ್ಲ. ಕೇವಲ ರ್ಯಾಂಕ್ ಗಳಿಸುವುದಕ್ಕಷ್ಟೇ ಸೀಮಿತವಾಗಿರುವುದರಿಂದ ಏನೂ ಅರಿಯದ 5ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 6ನೇ ತರಗತಿ ವಿದ್ಯಾರ್ಥಿ ಅತ್ಯಾಚಾರ ಮಾಡುತ್ತಾನೆ. 7ನೇ ತರಗತಿ ವಿದ್ಯಾರ್ಥಿ ಒಂಟಿಯಾಗಿ ಮಲಗುವ ಪರಿಸ್ಥಿತಿ ಬಂದಿದೆ ಎಂದರೆ ಅದಕ್ಕೆ ಸಂಸ್ಕಾರ, ಸಂಸ್ಕತಿ ಇಲ್ಲದ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ದೂರಿದರು.
ಸಮಾರಂಭದಲ್ಲಿ ಆಡಳಿತಾಧಿಕಾರಿ ಜಗದೀಶ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜೇನುಕಲ್ ಎಜುಕೇಷನ್ ಟ್ರಸ್ಟಿನ ಮುಖ್ಯಸ್ಥ ಎ.ಬಿ.ಗುರುಸಿದ್ದೇಶ್, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಎಸ್.ಸಿ.ಸಿದ್ದರಾಮಪ್ಪ, ಹಾಗೂ ವರ್ತಕರ ಸಂಘಧ ಉಪಾಧ್ಯಕ್ಷ ದಂದೂರು ರವಿ ವೇದಿಕೆಯಲ್ಲಿದ್ದರು.