ನಾನಾ ಇಲಾಖೆಗಳಿಗೆ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಭೇಟಿ, ಪರಿಶೀಲನೆ
ಹೊಳೆನರಸೀಪುರ: ಲೋಕಾಯುಕ್ತ ಎಸ್ಪಿ ವೇದಮೂರ್ತಿ ಮತ್ತವರ ತಂಡವು ಕೆಲವು ದೂರುಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ನಾನಾ ಇಲಾಖಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಾನಾ ಇಲಾಖೆಗಳಿಗೆ ಭೇಟಿ ನೀಡಿದ ನಂತರ ಇಲ್ಲಿನ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸ್ಟೆಲ್ ಮೇಲ್ವಿಚಾರಕರಿಗೆ ಹಾಗೂ ಮಹಿಳಾ ಸಿಬ್ಬಂದಿಗೆ ಕಿರುಕುಳ ಹಾಗೂ ಹಾಸ್ಟೆಲ್‌ಗಳಲ್ಲಿ ಹಾಜರಾತಿ ಕಡಿಮೆ ಇದ್ದರೂ ಪೂರ್ಣವಾದ ಹಾಜರಾತಿ ನೀಡುವಂತೆ ಮೇಲ್ವಿಚಾರಕರಿಗೆ ಒತ್ತಾಯ ಮಾಡುತ್ತಾರೆ ಎನ್ನುವ ಇಲ್ಲಿನ ಬಿಸಿಎಂ ಅಧಿಕಾರಿ ತಿಮ್ಮೇಗೌಡ ಅವರ ಮೇಲಿನ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಖುದ್ದಾಗಿ ಬಿಸಿಎಂ ಕಚೇರಿಗೆ ಭೇಟಿ ನೀಡಿದರು.
ಆದರೆ, ಇಲ್ಲಿನ ಬಿಸಿಎಂ ಅಧಿಕಾರಿ ತಿಮ್ಮೇಗೌಡ ಒಂದು ವರ್ಷದ ದೀರ್ಘ ರಜೆಯ ಮೇಲೆ ತೆರಳಿರುವ ಹಿನ್ನೆಲೆಯಲ್ಲಿ ಹಲವು ಕಡತಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ತೆರಳಿದರು.
ಪಟ್ಟಣಕ್ಕೆ ಆಗಮಿಸುವುದಕ್ಕೂ ಮೊದಲು ತಾಲೂಕಿನ ಹಂಗರಹಳ್ಳಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದ ಲೋಕಾಯುಕ್ತ ಎಸ್ಪಿ ವೇದಮೂರ್ತಿ, ಅಲ್ಲಿನ ಹಾಸ್ಟೆಲ್‌ನ ವ್ಯವಸ್ಥೆಯ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ ಅಂಗನವಾಡಿ ಮಕ್ಕಳಿಗೆ ಆಹಾರ ತಯಾರಿಸುವ ಘಟಕದಲ್ಲಿನ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಅಲ್ಲಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರುಗಳಲ್ಲಿ ಕೆಲವರು ಸುಳ್ಳು ಅಂಗವಿಕಲರ ಪ್ರಮಾಣ ದೃಢೀಕರಣ ಪತ್ರವನ್ನು ಸಲ್ಲಿಸಿ ನೌಕರಿ ಗಿಟ್ಟಿಸಿದ್ದಾರೆ ಎಂದು ರಾಜ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಕುರಿತಂತೆ ಲೋಕಾಯುಕ್ತರ ಆದೇಶದಂತೆ ತನಿಖಾಧಿಕಾರಿಯಾಗಿರುವ ಜಿಲ್ಲೆಯ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ- ನಿರ್ದೇಶಕರ ಮೂಲಕ ತಾಲೂಕಿನ 17 ಶಿಕ್ಷಕರಿಗೆ ನೊಟೀಸ್ ಜಾರಿಗೊಳಿಸಿದೆ.
ಈ 17 ಶಿಕ್ಷಕರು, ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಫೆ. 19ರಂದು ಹಾಸನದಲ್ಲಿ ನಡೆಯುವ ಮರು ವೈದ್ಯಕೀಯ ತಪಾಸಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಡಿಎಚ್‌ಒ ಅವರ ವೈದ್ಯಕೀಯ ತಪಾಸಣಾ ವರದಿ ಬಂದ ನಂತರ ಎಲ್ಲ ದಾಖಲಾತಿಗಳನ್ನೂ ಲೋಕಾಯುಕ್ತರಿಗೆ ಸಲ್ಲಿಸುವುದಾಗಿ ಎಂದು ತಿಳಿಸಿದರು.