ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಸತಿ ಶಾಲೆ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ: ದೇವೇಗೌಡ ಅಸಮಾಧಾನ

Srinivasa Murthy VN
Updated On : 16 Feb 2014, 10:17 am

ಹೊಳೆನರಸೀಪುರ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿನ ವಸತಿ ಶಾಲೆಗಳ ಶಿಕ್ಷಕರ ಸೇವೆಯನ್ನು ಖಾಯಂಗೊಳಿಸುವುದೂ ಸೇರಿದಂತೆ ಈ ಶಿಕ್ಷಕರುಗಳಿಗೆ ವೇತನ ನೀಡುವಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇಲ್ಲಿ ರಾಜ್ಯ ಸರ್ಕಾರದ ನೀತಿ  ವಿರುದ್ಧ ಅಸಮಾಧಾನ ಹೊರಹಾಕಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕಿನ ಎಸ್.ಅಂಕನಹಳ್ಳಿ ಬಳಿಯಲ್ಲಿ ರು. 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಭಾನುವಾರ ಉದ್ಘಾಟಿಸಿ ಗೌಡರು ಮಾತನಾಡಿದರು.
ರಾಜ್ಯದಲ್ಲಿನ ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ರೂಪಿಸಲಾದ ವಸತಿ ಶಿಕ್ಷಣ ವ್ಯವಸ್ಥೆಗೆ ರಾಜ್ಯ ಸರ್ಕಾರ ಸಮರ್ಪಕವಾದ ಸಹಕಾರ ನೀಡುತ್ತಿಲ್ಲ ಎಂಬ ಬೇಸರವನ್ನು ದೇವೇಗೌಡರು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು.
ಎಲ್ಲಾ ವರ್ಗದ ಮಕ್ಕಳಿಗೂ ಮೊರಾರ್ಜಿ ವಸತಿ ಶಾಲೆಯಲ್ಲಿ ಸಮರ್ಪಕವಾದ ಶಿಕ್ಷಣದ ವ್ಯವಸ್ಥೆಯು ದೊರಕುವಂತಾಗಲು ವಸತಿ ಶಾಲೆಗಳಲ್ಲಿನ ಪ್ರಾಂಶುಪಾಲರು ಹಾಗೂ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಕಿವಿಮಾತು ಹೇಳಿದ ಗೌಡರು, ತಾವು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಮೊರಾರ್ಜಿ ದೇಸಾಯಿ ಅವರಂಥ ಪ್ರಾಮಾಣಿಕ ವ್ಯಕ್ತಿತ್ವವುಳ್ಳವರ ಹೆಸರು ಶಾಶ್ವತವಾಗಿ ಉಳಿಯಲಿ ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿನ ಪ್ರತಿ ಜಿಲ್ಲೆಗಳಲ್ಲೂ ವಸತಿ ಶಾಲೆಗಳನ್ನು ಅರಂಭಿಸಲಾಯಿತು ಎಂದರು.
ವಿವಿಧ ಯೋಜನೆಗಳು: ಆನಂತರ, ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, 5 ಕೋಟಿ ರು.ಗಳ ವೆಚ್ಚದಲ್ಲಿ ಪರಿಶಿಷ್ಟ ಜನಾಂಗದ 250 ಮಕ್ಕಳಿಗಾಗಿ ನಿರ್ಮಿಸಲಾಗಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ, ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು, ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿಯೇ ಹಾಸನದಲ್ಲಿ ಉದ್ಯೋಗಸ್ಥ ಅರ್ಹರಿಗಾಗಿ ಸಂಜೆ ಎಂಜಿನೀಯರಿಂಗ್ ಕಾಲೇಜನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದಲ್ಲದೇ, ಹೊಳೆನರಸೀಪುರ ಹಾಗೂ ಹಾಸನದಲ್ಲಿ ಸದ್ಯದಲ್ಲಿಯೇ ಸಂಜೆ ಪಾಲಿಟೆಕ್ನಿಕ್ ಕಾಲೇಜನ್ನೂ ಆರಂಭಿಸಲಾಗುವುದು ಎಂದರು.
ಶೀಘ್ರದಲ್ಲೇ ಕಾಮಗಾರಿ: ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು 21ಕೋಟಿ ರು.ಗಳ ಅವಶ್ಯಕತೆಯಿದ್ದು, ಈ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಅವಶ್ಯಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಹೇಮಾವತಿ ನದಿಯಿಂದ ಕಸಬಾ ಹೋಬಳಿಯ 8 ಗ್ರಾಮಗಳು ಹಾಗೂ ಹಳ್ಳಿಮೈಸೂರು ಭಾಗದ 13 ಹಳ್ಳಿಗಳಿಗೆ ಶಾಶ್ವತವಾಗಿ ನೀರು ಒದಗಿಸುವ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಕುಸುಮ ಸಣ್ಣಸ್ವಾಮಿ, ಉಪಾಧ್ಯಕ್ಷ ಡಿ. ಕೃಷ್ಣಪ್ಪ, ಜಿಪಂ ಸದಸ್ಯ ಎಚ್.ಎನ್. ದೇವೇಗೌಡ (ಪಾಪಣ್ಣಿ), ತಾಪಂ ಸದಸ್ಯರಾದ ಪುಷ್ಪಾಗೌಡೇಗೌಡ, ಕೆ.ಕೆ. ಲೋಕೇಶ್, ಕ್ರೈಸ್ ಸಂಸ್ಥೆಯ ಸೂಪರಿಂಟೆಂಡೆಂಟ್ ರಾಘವನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್ ಮೊದಲಾದವರು ಹಾಜರಿದ್ದರು.

ಯೋಗ್ಯರನ್ನು ಗುರುತಿಸುವುದು ಕಷ್ಟ: ದೇವೇಗೌಡ
ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಯೋಗ್ಯರನ್ನು ಗುರುತಿಸುವುದು ಕಷ್ಟದ ಕೆಲಸವಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ದೇವೇಗೌಡರು ಆಶಿಸಿದರು. ದೇಶದ ರಾಜಕಾರಣ ತೀರಾ ಹದೆಗೆಟ್ಟಿದ್ದು, ರಾಜಕಾರಣ ನಿಂತಲ್ಲೇ ನಿಲ್ಲದು ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement