ಬೋನಿಗೆ ಬಿತ್ತು ಬಾಲಕನ ಬಲಿ ಪಡೆದಿದ್ದ ಚಿರತೆ
ಹಾಸನ: ಬಾಲಕನನ್ನು ತಿಂದು ಹಾಕಿದ್ದ ನರಭಕ್ಷಕ ಹೆಣ್ಣು ಚಿರತೆ ಕೊನೆಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ ಬಿದ್ದಿದೆ. ಚಿರತೆ ಸೆರೆಗೆ ಕಲ್ಲುಗುಡಗನಹಳ್ಳಿಯಲ್ಲಿ ಬೋನ್ ಇಡಲಾಗಿತ್ತು. ಮಂಗಳವಾರ ಸೆರೆ ಸಿಕ್ಕಿರುವ ಈ ಚಿರತೆ ಕೆಲವು ದಿನಗಳ ಹಿಂದೆ ತಾಲೂಕಿನ ನಾಗನಹಳ್ಳಿಯಲ್ಲಿ ತೇಜಸ್ ಎಂಬ ಬಾಲಕನನ್ನು ಹೊತ್ತೊಯ್ದು ತಿಂದು ಹಾಕಿತ್ತು. ಹೀಗಾಗಿ ಈ ಚಿರತೆಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ವಿಶೇಷ ಎಂದರೆ, ಮರಿ ಚಿರತೆಯೊಂದು ಕಳೆದ ವಾರ ಬೋನಿಗೆ ಬಿದ್ದ ಸಂದರ್ಭದಲ್ಲಿ ಈ ಹೆಣ್ಣು ಚಿರತೆ ಬೋನಿನ ಬತ್ತಿರ ಬಂದು ಹೋಗಿತ್ತು. ಆದರೆ, ಬೋನಿಗೆ ಸೆರೆ ಸಿಕ್ಕಿರಲಿಲ್ಲ. ಜೊತೆಗೆ ಬೋನಿನ ಹತ್ತಿರ ಯಾರು ಸುಳಿಯದಂತೆ ಪ್ರತಿರೋಧ ವ್ಯಕ್ತಪಡಿಸಿತ್ತು. ಈಗ ಕೊನೆಗೂ ಸೆರೆ ಸಿಕ್ಕಿದೆ. ಈ ಚಿರತೆ ಸೆರೆ ಸಿಕ್ಕುವ ಮೂಲಕ ಇದು ನಾಲ್ಕನೇ ಚಿರತೆಯಾಗಿದ್ದು, ಈ ಭಾಗದಲ್ಲಿ ಮತ್ತಷ್ಟು ಚಿರತೆಗಳು ಇವೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ವಾಗ್ವಾದ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಿಗೆ ಚಿರತೆಯನ್ನು ಸಾಗಿಸಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಈ ಭಾಗದಲ್ಲಿ ಇರುವ ಎಲ್ಲಾ ಚಿರತೆಗಳನ್ನು ಸೆರೆ ಹಿಡಿಯುವವರೆಗೂ ನಾವು ಇಲ್ಲಿಂದ ಈ ಚಿರತೆಯನ್ನು ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ನಡುವೆ ಕೆಲವು ಸಮಯ ವಾಗ್ವಾದ ನಡೆಯಿತು.