ಗಗನಕ್ಕೇರಿದ ಕೊಬ್ಬರಿ ಬೆಲೆ
-ದಯಾಶಂಕರ ಮೈಲಿ
ಹಾಸನ: ಈರುಳ್ಳಿ ಬೆನ್ನಲ್ಲೇ ರಾಜ್ಯದ ಜನತೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೊಬ್ಬರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೊಬ್ಬರಿ ಎಣ್ಣೆ ಬೆಲೆಯೂ ಗಗನಕ್ಕೇರಿದೆ. ಪ್ರತಿ ಕ್ವಿಂಟಲ್ ಕೊಬ್ಬರಿ ಬೆಲೆ 15 ಸಾವಿರ ಸಮೀಪ ತಲುಪಿದ್ದರೆ, ಪ್ರತಿ ಕೆ.ಜಿ. ಕೊಬ್ಬರಿ ಎಣ್ಣೆ ದರ 175ರಿಂದ 180 ತಲುಪಿದೆ. ಇದು ಈವರೆಗಿನ ದಾಖಲೆ ಬೆಲೆಯಾಗಿದೆ.್ಙ
ಆದರೆ, ಈ ಬೆಲೆ ಹೆಚ್ಚಳದ ಲಾಭ ತೆಂಗು ಬೆಳೆಗಾರರಿಗೆ ಸಿಗುತ್ತಿಲ್ಲ. ಮಧ್ಯವರ್ತಿಗಳಷ್ಟೆ ಕಾಸು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊಬ್ಬರಿ ಮಾರುಕಟ್ಟೆಗಳಿರುವುದು ಹಾಸನ ಜಿಲ್ಲೆ ಅರಸೀಕೆರೆ, ಚನ್ನರಾಯಪಟ್ಟಣ, ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಹುಳಿಯಾರಿವಿನಲ್ಲಿ. ಇಲ್ಲಿರುವ ಎಪಿಎಂಸಿ ಮಾರುಕಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಕೊಬ್ಬರಿ ಬರುತ್ತಿಲ್ಲ.
ಏನು ಕಾರಣ?: ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆಯಿಲ್ಲದೆ ಭೂಮಿಯಲ್ಲಿ ತೇವಾಂಶ ಗಣನೀಯ ಪ್ರಮಾಣದಲ್ಲಿ ಕುಗ್ಗಿದ ಪರಿಣಾಮ ತೆಂಗಿಗೆ ಸುಳಿ ರೋಗ ಸುತ್ತಿಕೊಂಡಿದೆ. ಇದರಿಂದ ತೆಂಗು, ಮತ್ತು ಕೊಬ್ಬರಿ ಉತ್ಪಾದನೆ ತೀವ್ರ ಕುಂಠಿತವಾಯಿತು. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳಗಳಲ್ಲೂ ತೆಂಗು ಇಳುವರಿ ಕುಂಠಿತವಾಗಿದೆ. ಈ ವರ್ಷವೂ ಮಳೆ ಕಡಿಮೆ ಆಗಿದ್ದು, ತೆಂಗು, ಕೊಬ್ಬರಿ ಉತ್ಪಾದನೆಯಲ್ಲಿ ತೀವ್ರವಾಗಿ ಇಳಿಮುಖವಾಗುವ ಸಾಧ್ಯತೆಗಳಿವೆ. ಇದರಿಂದ ಕೊಬ್ಬರಿ ಎಣ್ಣೆ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಸಿಹಿ ಪ್ರಿಯರಿಗೆ ನಿರಾಸೆ: ರಾಜ್ಯದ ಕೊಬ್ಬರಿ ಗುಜರಾತ್, ರಾಜಸ್ಥಾನ, ದೆಹಲಿ, ಹರಿಯಾಣ ರಾಜ್ಯಗಳಿಗೆ ಹೆಚ್ಚು ಮಾರಾಟವಾಗುತ್ತಿತ್ತು. ಅಲ್ಲಿ ತಯಾರಾಗುವ ಕೊಬ್ಬರಿ ಸಿಹಿಖಾದ್ಯಗಳು ಜನಪ್ರಿಯ. ಇದೀಗ ಕೊಬ್ಬರಿ ಬೆಲೆ ಹೆಚ್ಚಾಗುವುದರಿಂದ ಕೊಬ್ಬರಿ ಖಾದ್ಯಗಳ ಬೆಲೆಗಳೂ ಗಣನೀಯವಾಗಿ ಹೆಚ್ಚಲಿವೆ.
ಮಳೆ ಕೊರತೆಯಿಂದ ತೆಂಗಿನ ಮರಗಳು ಒಣಗಿವೆ. ಇದರಿಂದ ಉತ್ಪಾದನೆ ಕುಂಠಿತವಾಗಿದೆ. ಹಾಗಾಗಿ ಕೊಬ್ಬರಿ, ತೆಂಗು ಮತ್ತು ಕೊಬ್ಬರಿ ಎಣ್ಣೆ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದೆ.
- ನಾಗೇಶ್, ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ