ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಎಂ ನಿವಾಸದ ಮುಂದೆ ಆಗಸ್ಟ್‌ನಲ್ಲಿ ರೈತರ ಧರಣಿ

Srinivasa Murthy VN
Updated On : 9 Jul 2014, 10:36 am

ಅರಸೀಕೆರೆ: ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸುವ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಾಲೂಕಿನ ರೈತಸಂಘ ಕಾರ್ಯಕರ್ತರು ಮತ್ತು ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಆಗಸ್ಟ್‌ನಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು.
 ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಾಲೂಕು ರೈತಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ಪ್ರಕಟಿಸಿದರು.
 ಪಟ್ಟಣದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತಸಂಘದ ತಾಲೂಕು ಘಟಕ ಮತ್ತು ತಾಲೂಕು ಹಸಿರುಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಹಿಂದೆ ಉಪವಾಸ ಸತ್ಯಾಗ್ರಹ, ಅರಸೀಕೆರೆ ಬಂದ್ ಆಚರಣೆ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗಿತ್ತು ಎಂದರು.
ಅಧಿಕಾರಿಗಳ ನಿರ್ಲಕ್ಷ್ಯ: ಅಂದು ಪ್ರತಿಭಟನೆ ಸ್ಥಳಕ್ಕೆ ಬಂದು ಭರವಸೆ ನೀಡಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಲ್ಲದ ಕಾರಣ ಹಾಗೂ ತಾಲೂಕಿನ ರೈತರ ಪ್ರಮುಖ ಬೇಡಿಕೆಯಾದ ತಾಲೂಕಿನ ಪ್ರತಿಯೊಂದು ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದರು.
 ಆದ್ದರಿಂದ ಆಗಸ್ಟ್‌ನಲ್ಲಿ ಪಕ್ಷಾತೀತವಾಗಿ ತಾಲೂಕಿನ ರೈತ ಬಾಂಧವರು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರ ಬೆಂಬಲದೊಂದಿಗೆ ಸಾವಿರಾರು ಜನರು ಅರಸೀಕೆರೆಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿನ ಗಣಪತಿ ದೇವಸ್ಥಾನದಿಂದ ಆರಂಭವಾಗುವ ಈ ಪಾದಯಾತ್ರೆಗೆ ರಾಜ್ಯ ರೈತಸಂಘದ ಅಧ್ಯಕ್ಷ ಹಾಗೂ ಶಾಸಕ ಪುಟ್ಟಣ್ಣಯ್ಯ ಮತ್ತು ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಚಾಲನೆ ನೀಡಲಿದ್ದಾರೆ ಎಂದರು.
 ಬೆಳೆವಿಮೆಗೆ ಆಗ್ರಹಿಸಿ ಪ್ರತಿಭಟನೆ: ಕಳೆದ ವರ್ಷ ತಾಲೂಕಿನಲ್ಲಿ ಉತ್ತಮ ಮಳೆ ಬಾರದೆ ರೈತರು ಬೆಳೆದ ಹೆಸರು ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಹೆಸರು ಬೆಳೆಗೆ ಮಾಡಿಸಿದ್ದ ಬೆಳೆವಿಮೆ ಹಣವನ್ನು ತಾಲೂಕಿನ ಎಲ್ಲಾ ಬ್ಯಾಂಕ್‌ಗಳು ರೈತರಿಗೆ ನೀಡುತ್ತಿದ್ದರು. ತಾಲೂಕಿನ ಜೆ.ಸಿ. ಪುರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಬೆಳೆವಿಮೆ ಸಂದಾಯ ಮಾಡಿದ ರೈತರಿಗೆ ಮಾತ್ರ ಬ್ಯಾಂಕಿನ ಅಧಿಕಾರಿಗಳು ಬೆಳೆವಿಮೆ ಹಣವನ್ನು ನೀಡುತ್ತಿಲ್ಲ.
  ಇದನ್ನು ವಿರೋಧಿಸಿ ತಾಲೂಕು ರೈತಸಂಘದ ವತಿಯಿಂದ ಜು.14 ಸೋಮವಾರದಂದು ಜೆ.ಸಿ.ಪುರ ಗ್ರಾಮದ ಎಸ್‌ಬಿಎಂ ಶಾಖೆಯ ಮುಂದೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಹೇಳಿದರು.  
 ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಬೋರನಕೊಪ್ಪಲು ಶಿವಲಿಂಗಪ್ಪ, ತಾಲೂಕು ಕಾರ್ಯದರ್ಶಿ ಅಣ್ಣಾಯಕನಹಳ್ಳಿ ಶಿವಮೂರ್ತಿ, ತಾಲೂಕು ಸಂಚಾಲಕ ಎಂ.ಪಿ.ಮಲ್ಲಿಕಾರ್ಜುನ, ಕರಗುಂದ ಶಿವಲಿಂಗಪ್ಪ ಮುಖಂಡರಾದ ಗೀಜಿಹಳ್ಳಿ ಶಿವಪ್ರಸಾದ್, ಬಿಸಲೇಹಳ್ಳಿ ನಾಗರಾಜ್, ರವೀಶ್ ಬಾಬು, ಮಂಜಣ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement