ಇಲ್ಲಿದೆ ಮರದ ಕೆಳಗೊಂದು ಕಾಲೇಜು
ಆಕಾಶವೇ ಚಾವಣಿ, ಭೂಮಿಯೇ ಆಸನ ಟಿ ದೊಡ್ಡ ಮಂಡಿಗನಹಳ್ಳಿ ಪಿಯು ವಿದ್ಯಾರ್ಥಿಗಳ ಕಥೆ ವ್ಯಥೆ
ಪದವಿ ಪೂರ್ವ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯುಂಟಾಗಿದೆ. ವಿದ್ಯಾರ್ಥಿಗಳು ಬಯಲಿನಲ್ಲೇ ಕುಳಿತು ಪಾಠ ಕೇಳುವಂತಾಗಿದೆ. ಕಾಲೇಜಿಗೆ 23 ಗುಂಟೆ ಜಾಗ ಮಂಜೂರಾಗಿದ್ದು, ಕಟ್ಟಣ ನಿರ್ಮಾಣಕ್ಕೆ ಹಣವನ್ನು ಸರ್ಕಾರ ನೀಡಬೇಕಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.
- ಪಿ.ರವಿಕುಮಾರ್
ಹಾಸನ: ಆಕಾಶವೇ ಛಾವಣಿ, ಭೂಮಿಯೇ ಆಸನವಾಗಿ, ಬಟಾಬಯಲಿನಲ್ಲೇ ಕೂತು ಪಾಠ ಕೇಳುವ ಪರಿಸ್ಥಿತಿ ನಗರದ ಕೂಗಳತೆ ದೂರದ ದೊಡ್ಡಮಂಡಿಗನಹಳ್ಳಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಂಟಾಗಿದೆ.
ನಗರದ ತಣ್ಣೀರುಹಳ್ಳಿ ಸಮೀಪದ ದೊಡ್ಡಮಂಡಿಗನಹಳ್ಳಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು 2007-08ರಲ್ಲಿ ಪ್ರಾರಂಭವಾಗಿ ಕಲಾ ಮತ್ತು ವಾಣಿಜ್ಯ ವಿಭಾಗಗಳ ತರಗತಿಗಳು ನಡೆಯುತ್ತಿವೆ. ಇಲ್ಲಿ 55 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಪ್ರಾರಂಭವಾದಾಗಿನಿಂದಲು ಸಹ ಇಲ್ಲಿನ ವಿದ್ಯಾರ್ಥಿಗಳು ಪಾಠ-ಪ್ರವಚನಕ್ಕೆ ಸ್ವಂತ ಕಟ್ಟಡವಿಲ್ಲದೆ ಬಟಾಬಯಲಿನಲ್ಲೇ ಕೂತು ವ್ಯಾಸಂಗ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ಸೌಲಭ್ಯಗಳು ಶೂನ್ಯ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ವ್ಯಾಸಂಗದ ಹಿತದೃಷ್ಟಿಯಿಂದ ಈ ಕಾಲೇಜು ಆರಂಭಿಸಲಾಗಿದೆ. ಆದರೆ ಕಾಲೇಜಿಗೆ ಸೂಕ್ತ ಮೂಲ ಭೂತ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಅನೇಕ ಕನಸುಗಳನ್ನು ಹೊತ್ತಿಕೊಂಡು ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿಗೆ ಕಟ್ಟಡವಿಲ್ಲದೆ ಇವತ್ತು ಕಂಗಾಲಾಗಿದ್ದಾರೆ.
ದೊಡ್ಡಮಂಡಿಗನಹಳ್ಳಿಯ ಗುಹೆ ಕಲ್ಲಮ್ಮ ದೇವಸ್ಥಾನದ ಪ್ರಾಥಮಿಕ ಪಾಠಶಾಲೆಯಲ್ಲಿ ಬೆಳಗ್ಗೆ 8.30ಕ್ಕೆ ಪಿಯು ತರಗತಿ ನೆಡಸಲಾಗುತ್ತಿದೆ. ನಂತರ 10.30ರಿಂದ ಪ್ರಾಥಮಿಕ ಶಾಲೆ ಪ್ರಾರಂಭವಾಗುತ್ತದೆ. ಆಗ ಪಿಯುಸಿ ವಿದ್ಯಾರ್ಥಿಗಳು ಶಾಲೆಯ ಆವರಣದ ಮರದ ಕೆಳಗೆ ಕೂತು ಪಾಠವನ್ನು ಕೇಳಬೇಕಾಗಿದೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ಹಾಸನರದಿಂದ ಸಕಲೇಪುರಕ್ಕೆ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿಯೇ ಕಾಲೇಜು ಇದ್ದು, ಶಬ್ಧ ಮಾಲಿನ್ಯದ ನಡುವೆ ಪಾಠ ಕೇಳಬೇಕಾಗಿದೆ. ಜೊತೆಗೆ ಪ್ರಾಥಮಿಕ ಶಾಲೆ ಇರುವುದರಿಂದ ಶಾಲೆಯ ಮಕ್ಕಳು ಆವರಣದಲ್ಲಿ ಆಟವಾಡುವುದರಿಂದ ಪಿಯುಸಿ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ.
ಶೌಚಾಲಯದ ಕೊರತೆ
ಪದವಿ ಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವುದರಿಂದ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಮುಜುಗರವನ್ನು ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಕಾಲೇಜಿನ ಉಪನ್ಯಾಸಕರು ಸಹ ಇದರ ಸಮಸ್ಯೆಯನ್ನು ಅನುಭವಿಸಬೇಕಾಗಿದೆ. ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ 23 ಗುಂಟೆ ಸರ್ಕಾರಿ ಜಾಗ ಮಂಜೂರಾಗಿದೆ. ಆದರೆ ಈವರೆಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗದ ಕಾರಣ ಇಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ. ಕಳೆದ ಬಜೆಟ್ನಲ್ಲಿ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಗಿದ್ದು, ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡುತ್ತಿದೆ. ಆದರೆ ಕಾಮಗಾರಿ ಮಾತ್ರ ಇನ್ನು ಪ್ರಾರಂಭವಾಗಿಲ್ಲ. ಇನ್ನಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಿಸಲು ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸಲು ಮುಂದಾಗಬೇಕಿದೆ.
ಪದವಿ ಪೂರ್ವ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ತೊಂದರೆಯಾಗಿದೆ. ಕಾಲೇಜಿಗೆ 23 ಗುಂಟೆ ಜಾಗ ಮಂಜೂರಾಗಿದ್ದು, ಕಟ್ಟಣ ನಿರ್ಮಾಣಕ್ಕೆ ಹಣವನ್ನು ಸರ್ಕಾರ ನೀಡಬೇಕಾಗಿದೆ. ಇನ್ನಾದರೂ ಸರ್ಕಾರ ಗಮನಕೊಡಬೇಕಾಗಿದೆ.
- ನಟರಾಜ್, ಉಪನ್ಯಾಸಕ
ನಾನಾ ಆಸೆಗಳನ್ನು ಇಟ್ಟುಕೊಂಡು ಈ ಕಾಜೇಲಿಗೆ ಸೇರಿದೆ. ಆದರೆ ಕಾಲೇಜಿಗೆ ಕಟ್ಟಡದ ಸಮಸ್ಯೆಯಿಂದಾಗಿ ಬಯಲಿನಲ್ಲೇ ಕೂತ ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವ್ಯಾಸಂಗಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ. ಸರ್ಕಾರ ಇತ್ತ ಗಮನಹರಿಸಿ ನಮಗೆ ಅನುಕೂಲ ಮಾಡಿಕೊಡಬೇಕು.
- ಕವಿತಾ, ವಿದ್ಯಾರ್ಥಿನಿ