ಧರ್ಮದ ಅಧ್ಯಯನ ಕ್ಷೀಣ
ಚನ್ನರಾಯಪಟ್ಟಣ: ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಶಾಸ್ತ್ರ ಮತ್ತು ಧರ್ಮಪ್ರಸಾರ ಪರಂಪರೆ ಅವನತಿಯತ್ತಾ ಸಾಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವತ್ತಾ ಮುಂದಾಗಬೇಕಾಗಿದೆ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಭಂಡಾರ ಹುಳ್ಳ ಬಸದಿಯಲ್ಲಿ ಶ್ರೀಗಳು ಮತ್ತು ಮುನಿಗಳು ಅಷಾಡ ಚತುರ್ದಶಿಯಂದು ಚಾತುರ್ಮಾಸಾಚಾರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಹಿಂದೆ ಪ್ರತಿ ಹಳ್ಳಿಗಳಲ್ಲಿಯೂ ಧರ್ಮ ಪರಂಪರೆಯನ್ನು ಉಳಿಸಲು ಹಾಗೂ ಶಾಸ್ತ್ರಗಳನ್ನು ಹೇಳವವರು ಹಲವಾರು ಮಂದಿ ಇದ್ದರು. ಆದರೆ ಇಂದಿನ ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಶಾಸ್ತ್ರ ಮತ್ತು ಧರ್ಮದ ಬಗ್ಗೆ ಅಧ್ಯಯನ ಮಾಡುವವರಿಲ್ಲದ ಕಾರಣ ಶಾಸ್ತ್ರದ ಅಧ್ಯಯನಕ್ಕೆ ಹಿಂದೆ ಬಿದ್ದಿದೆ ಎಂದು ತಿಳಿಸಿದರು.
ಗೌರವ ಧನ ನೀಡಿ: ಧರ್ಮ ಪ್ರಚಾರಕರು ಹಾಗೂ ಶಾಸ್ತ್ರ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವವರನ್ನು ಗುರುತಿಸಿ ಅವರಿಗೆ ಗೌರವ ಧನ ನೀಡಿದಾಗ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಸಂಸ್ಕೃತಿ ಉಳಿಸಿ ಶಾಸ್ತ್ರ ಸಂಪ್ರದಾಯಗಳನ್ನು ಉಳಿಸುವ ಕಾರ್ಯ ಮಾಡುತ್ತಾರೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಧರ್ಮದ ಅರಿವು ಯುವಕರಲ್ಲಿ ಮಾಯವಾಗುತ್ತಿದ್ದು, ಧರ್ಮ ಪ್ರಚಾರ ಅಗತ್ಯವಾಗಿದೆ. ಧರ್ಮಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡುವುದು ಹಾಗೂ ಅಳಿಸುತ್ತಿರುವ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳನ್ನು ತಿಳಿಯುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಆಚಾರ್ಯ ಮುನಿಶ್ರೀ 108 ಸಚ್ಚಿದಾನಂದ ಮಹಾರಾಜರು, ಮುನಿಶ್ರೀ 108 ಶೃತನಂದಿ ಮಹಾರಾಜರು, ಆರ್ಯಿಕಾ105 ಶಿವಮತಿ ಮಾತಾಜಿ, ಆರ್ಯಿಕಾ 105 ಋದ್ದಿಶ್ರೀ ಮಾತಾಜಿ ಕ್ಷುಲ್ಲಿಕಾ ಶ್ರೀ ಸರ್ವಜ್ಞಮತಿ ಮಾತಾಜಿ ಕ್ಷುಲ್ಲಿಕಾಶ್ರೀ ಸಿದ್ದಿಶ್ರೀ ಮಾತಾಜಿ ತಮಿಳುನಾಡಿನ ಹರಹಂತಗಿರಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.