'ವಿದ್ಯಾರ್ಥಿಗಳು ಜನಪದ ಸಾಹಿತ್ಯ ಅಧ್ಯಯನ ಮಾಡಲಿ'
ಸಂವಹನ ಕ್ರಿಯೆಗೆ ಪರಿಣಾಮಕಾರಿ ಮಾಧ್ಯಮ
ಹೊಳೆನರಸೀಪುರ: ಕನ್ನಡ ಭಾಷೆ ಹಾಗೂ ಸಾಹಿತ್ಯವು ಶಾಸ್ತ್ರೀಯ ಸ್ಥಾನಮಾನ ಪಡೆದರೂ ರಾಜಕೀಯವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಇಂದಿನ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ಜನಪದ ಸಾಹಿತ್ಯವನ್ನು ಸ್ವಯಂಪ್ರೇರಣೆಯಿಂದ ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾದ ಕೆ.ಬಿ.ವೆಂಕಟಸ್ವಾಮಿ ಮನವಿ ಮಾಡಿದರು.
ಇಲ್ಲಿನ ಜನಪದ ಕಲಾ ಪರಿಷತ್ತಿನ ವತಿಯಿಂದ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಹನಕ್ಕೆ ಸಹಕಾರಿ: ಶಿಕ್ಷಕ ಉಮೇಶ್ ಮಾತನಾಡಿ, ಜಾನಪದದ ಮೂಲ ನೆಲೆ ಗ್ರಾಮೀಣ ಪರಿಸರದಲ್ಲಿದ್ದು, ಸಂವಹನ ಕ್ರಿಯೆಗೆ ಅತ್ಯಂತ ಪರಿಣಾಮಕಾರಿ ಮಾಧ್ಯಮವೆಂದರೆ, ಜನಪದ ಗೀತೆಗಳಂತಹ ಹಾಡುಗಳು. ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ಗದ್ದರ್ ಅವರು ಹಾಡಿದರೆ 5 ಲಕ್ಷ ಜನ ಕೇಳಲು ಸೇರುತ್ತಾರೆ ನಮ್ಮಲ್ಲಿ 60-70 ರೀತಿಯ ಜಾನಪದ ಕಲೆಗಳಿವೆ ಎಂದರು. ಪರಿಷತ್ತಿನ ಅಧ್ಯಕ್ಷ ಎಚ್.ಎನ್. ಕೃಷ್ಣ, ಜನಪದ ಪರಿಷತ್ ಕೇವಲ ಜನಪದ ಸಾಹಿತ್ಯದ ಅಭಿವೃದ್ಧಿಯಲ್ಲಿ ತೊಡಗದೆ ಪ್ರತಿಭಾ ಪುರಸ್ಕಾರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಆಸಕ್ತಿ ಇಲ್ಲ: ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕೇಶ್ ಮಾತನಾಡಿ, ದೃಶ್ಯ ಮಾಧ್ಯಮದಿಂದ ಜನಪದ ಸಾಹಿತ್ಯದೆಡೆಗಿನ ಆಸಕ್ತಿ ಇಂದಿನ ಜನಾಂಗದಲ್ಲಿ ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ಗುಣಶೇಖರ್ ಹಾಗೂ ವಿಜಯಕುಮಾರಿಯವರು ಉಪಸ್ಥಿತರಿದ್ದರು. ಕಾವ್ಯಶ್ರೀ ಕೃಷ್ಣ ಅವರು ಹಾಡಿನ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಇದೇ ಸಂದರ್ಭದಲ್ಲಿ ಜನಪದ ಗೀತ ಗಾಯನ ಸ್ಪರ್ಧೆ ನೆಡೆಸಲಾಯಿತು . ಶಿಕ್ಷಕರಾದ ಪ್ರಕಾಶ್ ಸ್ವಾಗತಿಸಿ, ಮಂಜಪ್ಪನವರು ನಿರೂಪಿಸಿದರು.