ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಆರ್‌ಎಚ್ ಬತ್ತದ ತಳಿ: ಹೆಚ್ಚು ಇಳುವರಿ ಸಾಧ್ಯ

Srinivasa Murthy VN
Updated On : 14 Jul 2014, 11:03 am

ಹಾಸನ: ರೈತರು ಆಧುನಿಕ ಬೇಸಾಯದ ಜೊತೆಗೆ ಹೈಬ್ರಿಡ್ ತಳಿಗಳನ್ನು ಉಪಯೋಗಿಸುವುದರಿಂದ ಹೆಚ್ಚು ಇಳುವರಿ ಹಾಗೂ ಅಧಿಕ ಆದಾಯ ಗಳಿಸಬಹುದು. ಕೆ.ಆರ್‌ಎಚ್. ಬತ್ತದ ತಳಿಯನ್ನು ನಾಟಿ ಮಾಡುವುದರಿಂದ ಎಕರೆಗೆ 45 ಕ್ವಿಂಟಾಲ್‌ವರೆಗೂ ಇಳುವರಿ ಪಡೆಯಬಹುದು ಎಂದು ಮಂಡ್ಯ ವಿ.ಸಿ. ಫಾರಂನ ವಿಜ್ಞಾನಿ ಡಾ. ಶಿವಕುಮಾರ್ ತಿಳಿಸಿದರು. ಚನ್ನರಾಯಪಟ್ಟಣ ತಾಲೂಕಿನ ಗದ್ದೆಬಿಂಡೇನಹಳ್ಳಿ ಗ್ರಾಮದಲ್ಲಿ ನಡೆದ ರೈತ ಪಾಠಶಾಲೆ ಹಾಗೂ ಆತ್ಮ  ಯೋಜನೆಯಡಿ ಬತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಈ ತಳಿಯ ಗೊನೆಯಲ್ಲಿ ಕಾಳು ಉದುರುವುದಿಲ್ಲ. ಊಟಕ್ಕೆ ರುಚಿಕರವಾದ ಅಕ್ಕಿಯಾಗಿದೆ. ಎಕರೆಗೆ  35 ರಿಂದ 45 ಕ್ವಿಂಟಾಲ್‌ವರೆಗೆ ಇಳುವರಿ ತೆಗೆಯಬಹುದಾದ ತಳಿಯಾಗಿದೆ ಎಂದರು. ಇಲಾಖೆಯ ಜಂಟಿ ನಿರ್ದೇಶಕ ಬಿ. ಶಿವರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿ.ಚೌಡೇನಹಳ್ಳಿಯಲ್ಲಿ ಸಾವಯವ ಭಾಗ್ಯ ಯೊಜನೆಯಡಿ ಅಪ್ಸ ಸೆಣಬು ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಕೃಷಿ ನಿರ್ದೇಶಕ ಮಲ್ಲೇಶ್ ಗೌಡ, ರೈತ ಮಹಿಳೆ ಜಯಲಕ್ಷ್ಮಮ್ಮ, ಕಾಳೇನಹಳ್ಳಿ ಸತ್ತೀಗೌಡ, ಬಿ.ಎಚ್. ಮೋಹನ್ ಕುಮಾರ್, ಜಗದೀಶ್, ಚನ್ನಕೇಶವ, ಗೋವಿಂದೇಗೌಡ, ಮಲ್ಲೇಶ್ ಗೌಡ, ರೈತರು ಹಾಗೂ ರೈತ ಅನುವುಗಾರರು ಇದ್ದರು.

ಸೆಸ್ಕ್ ಕಚೇರಿಗೆ  ಬೀಗ ಜಡಿದು ಪ್ರತಿಭಟನೆ
ಭಾರತೀನಗರ: ಟ್ರಾನ್ಸ್‌ಫಾರ್ಮರ್ ಕೆಟ್ಟುನಿಂತು 25 ದಿನಗಳು ಕಳೆದಿರುವುದರಿಂದ ಗ್ರಾಮ ಕಗ್ಗತ್ತಲಿನಿಂದ ಕೂಡಿದೆ. ದುರಸ್ಥಿಗೆ ಕ್ರಮಕೈಗೊಳ್ಳಬೇಕೆಂದು ಸೆಸ್ಕ್ ಕಚೇರಿಗೆ ಕೆ.ಪಿ.ದೊಡ್ಡಿ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ನಡೆಸಿದರು. ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಡಬೇಕೆಂದು ಸೆಸ್ಕ್ ಇಲಾಖೆಗೆ ಹಲವ್ಕ್ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಪೊಲೀಸ್ ಠಾಣೆಗೂ ಈ ಬಗ್ಗೆ ದೂರು ನೀಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 25 ದಿನಗಳಿಂದ  ಗ್ರಾಮದಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ವಿದ್ಯಾರ್ಥಿಗಳು ಓದುವುದಕ್ಕೂ ತೊಂದರೆಯಾಗಿದೆ.

ಜಿಲ್ಲಾ ಮುದ್ರಣಕಾರರ ಸಂಘಕ್ಕೆ ಅಧ್ಯಕ್ಷರ ಆಯ್ಕೆ
ಹಾಸನ: ನಗರದ ಶ್ರೀ ಪಾಂಡುರಂಗ ದೇವಸ್ಥಾನ ರಸ್ತೆ ಬಳಿ ಇರುವ ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾ ಮುದ್ರಣಕಾರರ ಸಂಘದ  ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಎಚ್.ಎಸ್. ಹೇಮಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಬೇಲೂರಿನ ವಿರೂಪಾಕ್ಷ, ಪ್ರಧಾನ ಕಾರ್ಯದರ್ಶಿ ಜಿ.ಎಲ್. ಸತ್ಯನಾರಾಯಣ, ಸಹಕಾರ್ಯದರ್ಶಿ ನಂಜೇಶ್ ಕುಮಾರ್, ಖಜಾಂಚಿಯಾಗಿ ಎಚ್.ಡಿ. ಸಂತೋಷ್ ಆಯ್ಕೆಗೊಂಡರು. ನಿರ್ದೇಶಕರಾಗಿ ಗೋಪಾಲ ಕೃಷ್ಣ ಶೆಟ್ಟಿ, ಚನ್ನರಾಯಪಟ್ಟಣ ಪುಟ್ಟಣ್ಣ, ರವಿಶಂಕರ್, ಹರೀಶ್, ಚಿದಂಬರ್, ಪ್ರವೀಣ್, ಆರ್. ಮಂಜುನಾಥ್, ಚೇತನ್, ಕಲ್ಯಾಣಗೌಡ, ಬೇಲೂರಿನ ಬಿ.ಆರ್. ರಾಜು ಆಯ್ಕೆಗೊಂಡರು. ನಾಮನಿರ್ದೇಶಕರಾಗಿ ಕಿರಣ್ ಕಿರಗಡಲು, ಬಾಲಸುಬ್ರಹ್ಮಣ್ಯ, ಅರುಣ್ ಕೋಡಿತ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಮೂವರು ಕಳ್ಳಿಯರ ಬಂಧನ
ಬೇಲೂರು: ಬೇಲೂರು ತಾಲೂಕಿನ ಹಳೆಬೀಡಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಕಳ್ಳಿಯರನ್ನು ಬಂಧಿಸಿ, 40 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಬೀಡಿನ ಬಸ್‌ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದರು. ವಿಚಾರಣೆ ಸಂದರ್ಭದಲ್ಲಿ ಚಿನ್ನದ ಸರವನ್ನು ಬಸ್ಸಿನಲ್ಲಿ, ಆಭರಣದ ಅಂಗಡಿಯಲ್ಲಿ ಕದಿಯುವುದು ಇವರ ಕೆಲಸ ಎಂಬುದು ತಿಳಿದು ಬಂದಿದೆ. ಅಲ್ಲದೆ ಕೆಲ ತಿಂಗಳ ಹಿಂದೆ ಬೇಲೂರಿನ ಶುಭ ಜ್ಯುವೆಲರಿಯಲ್ಲಿ ಚಿನ್ನದ ಸರವನ್ನು ಇವರೇ ಕದ್ದಿರುವ ಬಗ್ಗೆಯೂ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ವೃತ್ತ ನಿರೀಕ್ಷಕ ಗಣೇಶ್ ತಿಳಿಸಿದ್ದು ಹಳೆಬೀಡು ಪಿಎಸ್‌ಐ ಮಂಜು ಸಿಬ್ಬಂದಿ ಇದ್ದರು.

ಹಿಂದುಳಿದವರ ಕಡೆಗಣನೆ ಆರೋಪ: 22ಕ್ಕೆ ಬಿಜೆಪಿ ವಿಧಾನಸೌಧ ಮುತ್ತಿಗೆ
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದು, ಈ ವಿರುದ್ಧ ಜು.22ರಂದು ವಿಧಾನ ಸೌಧ ಮುತ್ತಿಗೆ ಹಾಕಲಾಗುತ್ತದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಶ್ರ ಕೃಷ್ಣಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಆಡಳಿತದಲ್ಲಿ ಬಸವ ಯೋಜನೆಯಡಿ ಮನೆಗಳು ನಿರ್ಮಾಣವಾಗುತ್ತಿಲ್ಲ. ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಶಾದಿ ಭಾಗ್ಯ ಯೋಜನೆಯನ್ನು ಹಿಂದುಳಿದ ವರ್ಗದವರಿಗೂ ವಿಸ್ತರಿಸಲು ಮುಂದಾಗಬೇಕು. ರಾಜ್ಯ ಸರ್ಕಾರ ಹಿಂದುಳಿದವರಿಗೆ ಅನ್ಯಾಯ ಮಾಡುತ್ತಿರುವುದರಿಂದ ಸಿಎಂ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಮುಖಂಡ ಕೆ.ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಹೇಳಿದರು. ಕಳೆದ ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸೂಚಿಸಿದ ಹಿಂದುಳಿದ ಜನಾಂಗವನ್ನು ಅಭಿನಂದಿಸಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಈ ಬಾರಿ ಉತ್ತಮ ಬಜೆಟ್ ನೀಡಿರುವುದು ಸಂತಸ ತಂದಿದೆ ಎಂದರು. ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಮನೋಹರ್, ಜಗದೀಶ್, ಉಪಾಧ್ಯಕ್ಷ ಅಬನ್ ಕೃಷ್ಣಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement