ವಿಪ್ರ ಪಾಕತಜ್ಞರ ನಿಧಿಗೂ ಹಣ ಮೀಸಲಿಡಿ
ಹಾಸನ: ಕೂಲಿ ಮಾಡುವ ಕಟ್ಟಡ ಕಾರ್ಮಿಕರ ನಿಧಿಗೆ ಸರ್ಕಾರ ಹಣ ಮೀಸಲಿಟ್ಟಿರುವಂತೆ ಅಡುಗೆ ಮಾಡುವ ವಿಪ್ರ ಪಾಕತಜ್ಞರ ನಿಧಿಗೂ ಹಣ ಮೀಸಲಿಡುವಂತೆ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರು ಮತ್ತು ರಾಜ್ಯ ಪಾಕತಜ್ಞ ಸಮ್ಮೇಳನ ಕಾರ್ಯಾಧ್ಯಕ್ಷ ಬೆಂಗಳೂರಿನ ಬಿ.ಎಸ್. ಸತ್ಯನಾರಾಯಣ್ ಒತ್ತಾಯಿಸಿದರು. ಜಿಲ್ಲಾ ವಿಪ್ರ ಪಾಕತಜ್ಞರ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ ಸಂಭ್ರಮ ಆಚರಣೆ ಅಂಗವಾಗಿ ನಗರದ ಶ್ರೀ ಸೀತಾರಾಮಾಂಜನೇಯ ದೇವಾಸ್ಥಾನ, ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸರ್ಕಾರದಿಂದ ನಮ್ಮ ವಿಪ್ರ ಪಾಕತಜ್ಞರ ಕ್ಷೇಮಾಭಿವೃದ್ಧಿ ಸಂಘಕ್ಕೂ ಪ್ರಯೋಜನ ನೀಡಬೇಕು ಎಂದು ಹೇಳಿದರು.
ಪರಿಹಾರಕ್ಕೆ ಸಲಹೆ: ಪ್ರಸ್ತುತ ತಾತ್ಕಲಿಕ ಕಲ್ಯಾಣ ಪರಿಹಾರ ನಿಧಿ ಮಾಡಲಾಗಿದ್ದು, ಅಡುಗೆ ಮಾಡುವವರಿಗೆ ಯಾವುದೇ ರೀತಿಯಲ್ಲಿ ಅವಘಡ ಸಂಭವಿಸಿದರೆ ಅಂತಹವರಿಗೆ ನಮ್ಮಲ್ಲೇ ಹಣ ಸಂಗ್ರಹಿಸಿ ಪರಿಹಾರ ನೀಡುವುದಾಗಿ ಹೇಳಿದರು.
ಸಮಾಜ ಸೇವೆ: ರಾಜ್ಯದಲ್ಲಿ 268 ಸಹಕಾರ ಬ್ಯಾಂಕುಗಳು ರಾಜ್ಯದಲ್ಲಿ ಇದೆ. ಅದರಲ್ಲಿ ಹೆಚ್ಚುನ ಸಂಸ್ಥೆಯನ್ನು ವಿಪ್ರರೇ ನಿರ್ಮಿಸಿದ್ದಾರೆ. ಆಡಳಿತದಲ್ಲಿ ಶೇಕಡ 30ರಷ್ಟು ಅಧಿಕಾರ ಕೂಡ ಪಡೆದಿರುವುದು ಸಂತೋಷದ ವಿಷಯ ಎಂದರು.
ಎಲ್ಲಾ ವರ್ಗದವರು ಅವರ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುವಂತೆ ಅಡುಗೆ ಮಾಡುವವರು ಕೂಡ ಮುಂದಾಗಬೇಕು. ಅಡುಗೆ ಮಾಡುವವರು ಎಂದರೆ ಇಂದು ಹೆಮ್ಮೆಯ ಸಂಗತಿ. ಸಮಾಜದಲ್ಲಿ ಸೇವೆ ಸಲ್ಲಿಸುವವರ ಸಾಲಿಗೆ ಸೇರುತ್ತಾರೆ ಎಂದು ತಿಳಿಸಿದರು. ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣರ ಮಹಾಸಭಾದ ಅಧ್ಯಕ್ಷ ಬಿ.ಎನ್. ಸುಬ್ರಹ್ಮಣ್ಯಂ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಿ.ಎಸ್. ಕೃಷ್ಣಸ್ವಾಮಿ, ಅಮೋಘ್ ಬ್ರಾಡ್‌ಬ್ಯಾಂಡ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಹಾಗೂ ಸೀತಾರಾಮಾಂಜನೇಯ ಸೇವಾ ಸಮಿತಿ ಉಪಾಧ್ಯಕ್ಷ ಕೆ.ಪಿ. ಸತ್ಯಪ್ರಮೋದ್, ಜಿಲ್ಲಾ ವಿಪ್ರ ಪಾಕತಜ್ಞರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಗೌರವಾಧ್ಯಕ್ಷ ಎನ್.ಎಸ್. ನಾಗರಾಜ್, ಉಪಾಧ್ಯಕ್ಷ ಪಿ.ಎಸ್. ವೆಂಕಟೇಶ್, ಕಾರ್ಯದರ್ಶಿ ಕೆ. ಶ್ರೀಕಾಂತ್ ಇತರರು ಇದ್ದರು.