ಕನ್ನಡ ಸಾಹಿತ್ಯ ಮತ್ತಷ್ಟು ಶ್ರೀಮಂತವಾಗಲಿ
ನಾಲ್ಕನೇ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ವೈ.ಎನ್. ನಾಗೇಶ್ ಕೌಂಡಿನ್ಯ ಆಶಯ
ಹೊಳೆನರಸೀಪುರ: ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವ, ಹೊಸ ಚಿಂತನೆ ಮತ್ತು ಹೊಸ ದೃಷ್ಟಿಕೋನಗಳುಳ್ಳ ಚೈತನ್ಯಪೂರ್ಣ ಸಾಹಿತ್ಯ ಯುವ ಸಮುದಾಯದಿಂದ ರೂಪುಗೊಳ್ಳಲಿ ಎಂದು ಸಮ್ಮೇಳನಾಧ್ಯಕ್ಷ ವೈ.ಎನ್. ನಾಗೇಶ್ (ಕೌಂಡಿನ್ಯ) ಅಭಿಪ್ರಾಯಪಟ್ಟರು.
ಇಲ್ಲಿನ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂದಿರದಲ್ಲಿ ಸೋಮವಾರ ನಡೆದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯಿಕ ಪರಂಪರೆ ಹೆಚ್ಚಿನದಾಗಿ ರೂಪುಗೊಳ್ಳುವ ಅಗತ್ಯ ಇದ್ದು, ಸಾಹಿತ್ಯಿಕ ರಚನೆಗೆ ಒರುವ ತೊಡಕುಗಳ ಕುರಿತು, ತೊಡಕುಗಳನ್ನು ನಿವಾರಿಸಿ ಸಾಹಿತ್ಯಿಕ ಪರಂಪರೆಯನ್ನು ಹೆಚ್ಚಿಸುವ ಮತ್ತು ಅವುಗಳಿಗೆ ವೇದಿಕೆ ನಿರ್ಮಿಸುವ ಕಾರ್ಯವಾಗಬೇಕಿದೆ ಎಂದರು.
ಸಾಹಿತ್ಯಿಕ ರಚನೆಯಲ್ಲಿ ವೈವಿದ್ಯತೆ ಅಗತ್ಯ: ಸಾಹಿತ್ಯವೆಂಬುದು ನಿಂತ ನೀರಿನಂತೆ ಮಡುಕಟ್ಟದೇ, ಆಧುನಿಕತೆ ಮೈತಳೆದಂತೆ ಸಾಹಿತ್ಯಿಕ ರಚನೆಯಲ್ಲಿ ವೈವಿದ್ಯತೆ ಬೆಳೆಯಬೇಕಿದೆ. ಸಾಹಿತ್ಯ ರಚನೆ ಎಂಬುದು ಬದುಕಿನ ಒಂದು ಮುಖ್ಯ ಭಾಗವಾಗುವ ಅವಶ್ಯಕತೆ ಇದ್ದು, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮತ್ತು ಸಾಹಿತ್ಯ ಸಮಾಜಮುಖಿಯಾದಾಗ ಅಂತಹ ಸಾಹಿತ್ಯಕ್ಕೆ ಬದುಕಿನ ಮೌಲ್ಯಗಳು ಬರುತ್ತವೆ ಎಂದರಲ್ಲದೇ, ಪ್ರಾಮಾಣಿಕತೆಯ ಕೊರತೆ ಎಲ್ಲ ಕ್ಷೇತ್ರಗಳಲ್ಲಿಯೂ ಕಂಡು ಬರುತ್ತಿದ್ದು, ಪ್ರತಿಭೆ ಇದ್ದರೂ ಪ್ರಾಮಾಣಿಕತೆ ದೇಶದ ಬಗ್ಗೆ ಅಭಿಮಾನ ಮತ್ತು ಕರ್ತವ್ಯನಿಷ್ಠೆ ಇಂದಿನ ಯುವ ಸಮುದಾಯದ ಪ್ರತಿಭಾವಂತರಲ್ಲಿ ಕಂಡುಬರುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಯಶಸ್ವಿ ನಿಯೋಜಕರು ಬೇಕಿದ್ದಾರೆ: ದೇಶಭಕ್ತಿ, ಅಭಿಮಾನ, ಪ್ರತಿಭೆ ಮತ್ತು ಸಾಧಕ ಮನಸ್ಸುಗಳುಳ್ಳ ದೇಶದ ಮಹಾನ್ ಚೇತನಗಳು ಇಂದು ಇಲ್ಲವಾಗಿದ್ದು, ಇಂತಹವರ ಅಗತ್ಯ ದೇಶಕ್ಕೆ ಇದೆಯಲ್ಲದೇ, ಅವರಲ್ಲಿದ್ದ ದೇಶಭಕ್ತಿ, ಕರ್ತವ್ಯಪರತೆಯನ್ನು ಮೈಗೂಡಿಸಿಕೊಳ್ಳಬಲ್ಲ ಧೀಮಂತ ವ್ಯಕ್ತಿಗಳು ಮತ್ತೊಮ್ಮೆ ಭಾರತದಲ್ಲಿ ಹುಟ್ಟಬೇಕಿದ್ದು, ಇಲ್ಲಿ ಹದೆಗೆಟ್ಟಿರುವ ಮತ್ತು ಸಂಪೂರ್ಣ ನಿಯಂತ್ರಣ ತಪ್ಪಿರುವ ಆಡಳಿತದ ವ್ಯವಸ್ಥೆಯನ್ನು ಸರಿಪಡಿಸುವ ಯಶಸ್ವಿ ನಿಯೋಜಕರು ಬೇಕಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರುವ ರಾಜಕೀಯ ಇಚ್ಚಾಶಕ್ತಿಯನ್ನು ಹೊಂದಿರುವ ರಾಜಕಾರಣಿಗಳು ನಮಗೆ ಬೇಕಿದ್ದು, ಇಂತಹವರು ಸಮಾಗಮಗೊಂಡು ಆಡಳಿತದ ಚುಕ್ಕಾಣಿ ಹಿಡದರೆ ದೇಶದ ಒಳಗೆ ಆಂತರಿಕ ಭದ್ರತೆ ಉಂಟಾಗುತ್ತದೆ ಎಂದರು.
ಮಕ್ಕಳನ್ನು ಸಾಕಿದರೆ ಪೋಷಕರ ಕರ್ತವ್ಯ ಮುಗಿದಂತಾಗುವುದಿಲ್ಲ, ಅದೇ ರೀತಿ ಕೇವಲ ಪಾಠ ಮಾಡಿದ ಮಾತ್ರಕ್ಕೆ ಶಿಕ್ಷಕರ ಜವಾಬ್ದಾರಿ ಮುಗಿಯುವುದಿಲ್ಲ, ಬದಲಿಗೆ ನಮ್ಮ ಸಂಸ್ಕೃತಿ ಬಗ್ಗೆ ಪರಿಚಯಿಸುವ, ಇತಿಹಾಸದ ಸಾಧಕರ ಬಗ್ಗೆ ತಿಳಿ ಹೇಳುವ, ದೇಶಭಕ್ತರ ಸಾಧನೆಗಳನ್ನು ತಿಳಿಸುವ ಕಾರ್ಯದ ಜೊತೆಗೆ ಭಾಷಾಭಿಮಾನ ಬೆಳೆಸಬೇಕು ಎಂದರಲ್ಲದೇ, ನಾವಾಡುವ ಮಾತೃ ಭಾಷೆಗೆ ಪ್ರತಿಯೊಬ್ಬರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಸನ್ನಿವೇಶ ಸೃಷ್ಟಿಯಾಗಬೇಕಿದೆ. ಭವಿಷ್ಯದ ನಾಡಿಗೆ ಪ್ರೇರಕ ಪ್ರಚೋದಕ ಶಕ್ತಿಯಾಗಿ ಮಕ್ಕಳನ್ನು ಬೆಳೆಸಬೇಕಿದೆ ಎಂದರು.
ಶಾಸಕ ಎಚ್.ಡಿ. ರೇವಣ್ಣ ಸಮ್ಮೇಳನ ಉದ್ಘಾಟಿಸಿದರು, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಜಿಪಂ ಸದಸ್ಯ ಎಚ್.ಎನ್. ದೇವೇಗೌಡ, ತಹಸೀಲ್ದಾರ್ ಎಸ್. ರಾಘವೇಂದ್ರ, ತಾಪಂ ಅಧ್ಯಕ್ಷ ಸಿ.ಆರ್. ಮಂಜುನಾಥ್ ಇದ್ದರು.
ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಮಳೆಯ ನಡುವೆಯೂ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ನೆರವೇರಿತು. ಇಲ್ಲಿನ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣವನ್ನು ತಹಸೀಲ್ದಾರ್ ಎಸ್.ರಾಘವೇಂದ್ರ ನೆರವೇರಿಸಿದರು. ಪರಿಷತ್ತಿನ ಧ್ವಜವನ್ನು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ನೆರವೇರಿಸಿದರೆ, ಕನ್ನಡ ಧ್ವಜವನ್ನು ತಾಪಂ ಅಧ್ಯಕ್ಷ ಮಂಜುನಾಥ್ ನೆರವೇರಿಸಿದರು.
ಮಳೆಯಲ್ಲೇ ಮೆರವಣಿಗೆ: ನಂತರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ವೈ.ಎನ್.ನಾಗೇಶ್ಕೌಂಡಿನ್ಯ ಅವರನ್ನು ಮೆರವಣಿಗೆಯಲ್ಲಿ ಕರೆತರಲು ಸಿದ್ಧತೆಗೊಳಿಸುತ್ತಿದ್ದಂತೆಯೇ ಸುರಿಯತೊಡಗಿತು. ಆದರೂ ಮಳೆಯ ನಡುವೆಯೇ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ನಾನಾ ಕಲಾ ತಂಡಗಳು, ಕರವೇ ಕಾರ್ಯಕರ್ತರು, ಪರಿಷತ್ತಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.