ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ: ಕೃಷ್ಣಪ್ಪ
ಹಾಸನ: ಗಿಡಮರಗಳ ನಾಶ ಹಾಗೂ ಪರಿಸರ ಮಾಲಿನ್ಯದಿಂದ ಪ್ರಕೃತಿಯಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳಾಗುತ್ತಿದೆ. ಇದರಿಂದ ಭೂಮಿಯ ಸಕಲ ಜೀವಿಗಳ ಮೇಲೆ ತೀವ್ರತರವಾದ ದುಷ್ಟರಿಣಾಮ ಬೀರುತ್ತಿದೆ ಎಂದು ಕೆಎಸ್ಆರ್ಪಿ ಪಡೆಯ ಕಮಾಂಡೆಂಟ್ ಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದರು. ನಗರದ ಎಸ್.ಬಿ.ಎಮ್ ಕಾಲೋನಿಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೇ ರೀತಿ ಪರಿಸರ ನಾಶ ಮುಂದುವರೆದರೆ ಮುಂದೆ ಜೀವ ಸಂಕುಲವೇ ನಾಶವಾಗುತ್ತದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ರಸ್ತೆ ಬದಿ ಗಿಡ ನೆಡಿ: ಜಿಲ್ಲಾ ಸ್ಕೌಟ್ಸ್ ಆಯುಕ್ತ ಪ್ರಕಾಶ್ ಎಸ್.ಯಾಜಿ ಮಾತನಾಡಿ, ನಗರದಲ್ಲಿ ಗಿಡಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಜೀವಿಗಳಿಗೆ ಅಗತ್ಯವಾಗಿರುವ ಆಮ್ಲಜನಕ ಕೊರತೆಯುಂಟಾಗುತ್ತಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲೂ ಕಡ್ಡಾಯವಾಗಿ ಗಿಡಮರಗಳನ್ನು ನೆಟ್ಟು ನಾವುಗಳು ಪೋಷಿಸಬೇಕಾಗಿದೆ ಎಂದರು.
ನಿವೃತ್ತ ಸರ್ಜನ್ ಡಾ.ವಾಸಪ್ಪ , ಡಿ.ಟಿ.ಸಿ ಕಾಂಚನಾಮಾಲಾ, ಸ್ಕೌಟ್ಸ್ ಶಿಕ್ಷಕ ಉಪೇಂದ್ರ, ಬ್ಯಾಂಕಿನ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ರಾಷ್ಟ್ರೀಯ ಸೇವಾ ಕಾರ್ಯಕರ್ತ ಆರ್.ಜಿ. ಗಿರೀಶ್, ಎಂ.ಟಿ.ಎಸ್.ಎಸ್. ಯೂತ್ ಗ್ರೂಪ್ನ ಸ್ವಾಗತ್, ಲೋಹಿತ್, ವೈ.ಬಿ ಕಾಂತರಾಜು ಇತರರು ಇದ್ದರು.