ಎಲ್ಲೆಡೆ ರಂಜಾನ್ ಸಂಭ್ರಮಾಚರಣೆ
ಕ.ಪ್ರ. ವಾರ್ತೆ, ಪಾಂಡವಪುರ, ಜು.29
ರಂಜಾನ್ ಹಬ್ಬದ ಪ್ರಯುಕ್ತ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ದರ್ಗಾ ಮೊಹಲ್ಲಾದಲ್ಲಿ ಜಮಾವಣೆಗೊಂಡ ಎಲ್ಲಾ ಮುಸಲ್ಮಾನರು ಮಸೀದಿಯ ಇಮಾಂ ಮೌಲಾನಾ ಹಝರತ್ ಮನೀಫ್ ಆಲಂ ರಝ್ವೀ ಅವರ ನೇತೃತ್ವದಲ್ಲಿ ಇಸ್ಲಾಂ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ಈದ್ಗಾ ಮೈದಾನ ಪ್ರವೇಶಿಸಿದರು. ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ
ಈದುಲ್ಫಿತ್ರ್ ಎಂದು ಕರೆಯಲ್ಪಡುವ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಪಪಂ ಅಧ್ಯಕ್ಷ ಡಿ. ಶ್ರೀನಿವಾಸ್, ಮಸೀದಿ ಅಧ್ಯಕ್ಷ ಜಮಾಲುದ್ದೀನ್, ಉಪಾಧ್ಯಕ್ಷ ಮಹಮದ್ ಹನೀಫ್, ಪ.ಪಂ. ಮಾಜಿ ಅಧ್ಯಕ್ಷ ಏಜಾಜ್ ಆಲೀ ಖಾನ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ನಜೀರ್ ಅಹಮದ್ ಸೇರಿದಂತೆ ಮುಸ್ಲಿಂ ಮುಖಂಡರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭ ಕೋರಿ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರಂಜಾನ್ ಹಬ್ಬವು ಧಾರ್ಮಿಕ ಮತ್ತು ವೈಜ್ಞಾನಿಕ ಸಂಕೇತವಾಗಿದೆ. ದುಡಿಯುವ ಕ್ಷೇತ್ರದಲ್ಲಿ ಹೆಚ್ಚಿನದಾಗಿ ಮುಸ್ಲಿಮರಿರುವುದರಿಂದ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಸಲ್ಮಾನರ ಪವಿತ್ರ ಗ್ರಂಥ ಕುರಾನ್ ಸಂಪೂರ್ಣ ಪಠಣ ಮಾಡಲಾಯಿತು.
ಮಳವಳ್ಳಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆಚರಣೆ ಮಳವಳ್ಳಿಯಲ್ಲಿ ಭರ್ಜರಿಯಾಗಿಯೇ ನಡೆಯಿತು.
ಕಳೆದ ಒಂದು ತಿಂಗಳಿಂದ ಉಪವಾಸ ಆಚರಿಸಿದ್ದ ಮುಸ್ಲಿಮರು ಮಂಗಳವಾರ ಸಾಮೂಹಿಕ ಪ್ರಾರ್ಥನೆ ಮಾಡಿ ರಂಜಾನ್ ಆಚರಿಸುವ ಮೂಲಕ ತಿಂಗಳ ಉಪವಾಸಕ್ಕೆ ಅಂತ್ಯವಾಡಿದ್ದಾರೆ. ಮಂಗಳವಾರ ಮುಂಜಾನೆಯಿಂದಲೆ ಪ್ರಾರಂಭವಾದ ರಂಜಾನ್ ಉತ್ಸವ ಪಟ್ಟಣದ ಪೇಟೆ ಹಾಗೂ ಕೋಟೆ ಮುಸ್ಲಿಮರು ಇಸ್ಲಾಂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪಟ್ಟಣದ ಕೋಟೆ ಹಾಗೂ ಪೇಟೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಟ್ಟಣದ ಸಿದ್ಧಾರ್ಥ ನಗರದಲ್ಲಿರುವ ಮುಸ್ಲೀಮರು ಈದ್ಗಾ ಮೈದಾನಕ್ಕೆ ತೆರಳಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಮಾಜ್ ಸಲ್ಲಿಸಿದರು.
ಮಸೀದಿಗಳಲ್ಲಿ ನಮಾಜ್ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ತೆರಳಿ ಈದ್ಗಾ ಮೈದಾನ ತಲುಪಿದ ಪೇಟೆ ಹಾಗೂ ಕೋಟೆ ಮುಸ್ಲಿಂ ಬಾಂಧವರು ಮುಸ್ಲಿಂ ಗುರುಗಳ ಆಶೀರ್ವಚನವನ್ನು ಪಡೆದರು. ನೂರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ರಂಜಾನ್ ಆಚರಿಸಿದರು
ನಾಗಮಂಗಲ: ರಂಜಾನ್ ದಿನ ಮುಸ್ಲಿಮರು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ವೇಳೆ ಮಾತನಾಡಿದ ತಾಲೂಕು ಮುಸ್ಲಿಂ ಸಮುದಾಯದ ಮ್ಯಾನೇಜಿಂಗ್ ಕಮಿಟಿ ಕಾರ್ಯದರ್ಶಿ ಎಸ್.ಕೆ. ಮಹಮ್ಮದ್ ಖಾಸೀಂ, ಮಹಮ್ಮದ್ ಪೈಗಂಬರ್ ಅವರ ತತ್ವ ಆದರ್ಶಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಅನಾಹುತಗಳು ಸಂಭವಿಸುವುದಿಲ್ಲ ಎಂದು ಆಭಿಪ್ರಾಯಪಟ್ಟರು.
ಮೌಲ್ವಿಗಳಾದ ಹಾಜಿ ಶೌಕತ್ಉಲ್ಲಾ ಮತ್ತು ಮುಫ್ತಿ ಇಮ್ದಾದ್ ಉಲ್ಲಾ ಕಳೆದ ಮೂರ್ನಾಲ್ಕು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ತಾಲೂಕಿಗೆ ಈ ಬಾರಿ ಉತ್ತಮ ಮಳೆಯಾಗಿ ಸಂಕಷ್ಟದಲ್ಲಿರುವ ರೈತರಲ್ಲಿ ನೆಮ್ಮದಿ ಕಾಣಲಿ, ನಾಡಿನ ಎಲ್ಲ ಸಮುದಾಯದಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಲು ಅಲ್ಲಾ (ದೇವರು) ಕರುಣಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸುವಂತೆ ಕರೆನೀಡಿದರು.
ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮುಸ್ಲಿಂ ಯುವಕರು ಮೆರವಣಿಗೆ ನಡೆಸಿ, ಪಟ್ಟಣದ ಭಿಕ್ಷುಕರಿಗೆ ಹಣ್ಣು ಹಂಪಲು, ನಗದು ದಾನ ಮಾಡಿದರು. ಬೆಳಗಿನಿಂದಲೇ ಹಬ್ಬದ ಸಡಗರದಲ್ಲಿದ್ದ ಮಕ್ಕಳು, ಯುವಕರು ಪರಸ್ಪರ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನೆ ನಡೆಯುವ ಸ್ಥಳ ಮತ್ತು ಮೆರವಣಿಗೆ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಮಿಟಿ ಅಧ್ಯಕ್ಷ ಖಲೀಲ್ ಉಲ್ಲಾ, ಪ.ಪಂ. ಸದಸ್ಯರಾದ ನೂರ್ ಅಹ್ಮದ್, ಅನ್ವರ್ ಪಾಷ, ಮುರ್ತಾಜಾ, ಮುಜಾಹಿದ್ ಪಾಷ ಸೇರಿದಂತೆ ಎಸ್ಡಿಪಿಐ ಮತ್ತು ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.