ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾನೂನು ಸಡಿಲಿಕೆ ದೌರ್ಜನ್ಯಕ್ಕೆ ಕಾರಣ

Srinivasa Murthy VN
Updated On : 29 Jul 2014, 10:53 am

ಮಂಡ್ಯ: ಕಾನೂನಿನ ಸಡಲಿಕೆಯೂ ಕೂಡ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಲು ಕಾರಣವಾಗಿದೆ.
ಹೆಣ್ಣಿನ ಮೇಲಿನ ನಡೆಯುವ ದೌರ್ಜನ್ಯಗಳು ಇಂದು ನಿನ್ನೆಯದಲ್ಲ. ಯುಗ - ಯುಗಾಂತರಗಳಿಂದಲೂ ನಡೆದುಕೊಂಡು ಬಂದಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾ. ಎ.ಜೆ.ಸದಾಶಿವ ಮಂಗಳವಾರ ಹೇಳಿದರು.  
ಭೋಗದ ವಸ್ತುವಲ್ಲ: ಹೆಣ್ಣನ್ನು ಭೋಗದ ವಸ್ತುವೆಂದು ಭಾವಿಸಿ, ಆಕೆಯ ಮೇಲೆ ಮಾನಸಿಕವಾಗಿ ದೌರ್ಜನ್ಯ ನಡೆಸಲಾಗುತ್ತಿದೆ. ಜಾತಿಯ ಕಾರಣದಿಂದಲೂ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಕೇವಲ ಅತ್ಯಾಚಾರಿಗಳು ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರೂ ಜವಾಬ್ದಾರರು. ಇಂತಹ ವಿಷಯಗಳಲ್ಲಿ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು. ಮಹಿಳೆಯರನ್ನು ಗೌರವದಿಂದ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ ಎಂದು ಎಚ್ಚರಿಸಿದರು.
ಕೇರಳ  ಹೊರತುಪಡಿಸಿ, ದೇಶದ ಉಳಿದೆಲ್ಲಾ ರಾಜ್ಯಗಳಲ್ಲೂ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಕಡಿಮೆಯಿದೆ. ಉತ್ತರ ಭಾರತದಲ್ಲಂತೂ ಹೆಣ್ಣಿನ ಅಭಾವ ಹೆಚ್ಚಾಗಿದೆ. ಕಾಮಾಸಕ್ತಿ ನೀಗಲು  ಲೈಂಗಿಕತೆಗೆ ಅವಕಾಶ ಸಿಗದೇ ಹೋದಾಗ ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ತೀರಾ ಆತಂಕದ ಸಂಗತಿ ಎಂದರು.
ಸರ್ಕಾರವೇ ಅಲ್ಲ: ಜನ ಸಾಮಾನ್ಯರ ನೋವು - ನಲಿವುಗಳಿಗೆ ಸ್ಪಂದಿಸದೇ ಇರುವ ಸರ್ಕಾರ ಸರ್ಕಾರವೇ ಅಲ್ಲ. ಸರ್ಕಾರಗಳಿಗೆ ಜನರ ಸಮಸ್ಯೆಗಳ ಆಳವಾದ ಅರಿವಿರಬೇಕು. ಅಭಿವೃದ್ಧಿಯ ದೂರದೃಷ್ಟಿ, ಮಾನವೀಯ ಸ್ಪಂದನೆ ಇದ್ದಾಗ ಮಾತ್ರ ಏನಾದರೂ ನಿರೀಕ್ಷಿಸಲು ಸಾಧ್ಯ. ಜನರ ಬಗ್ಗೆ ಉದಾಸೀನ ಮನೋಭಾವ ಹೆಚ್ಚಾಗಿದೆ.  ಅಭಿವೃದ್ಧಿ ಚಿಂತನೆಗಳಂತೂ ಇಲ್ಲವೇ ಇಲ್ಲ.  ಹೃದಯವಂತಿಕೆ ಇಲ್ಲದ ಸರ್ಕಾರಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನೆಮ್ಮದಿ ಸಾಧ್ಯ: ಸಮರ್ಥ ಸರ್ಕಾರವನ್ನು ಮುನ್ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಹಾಗೂ ನಾನಾ ಆಯೋಗಗಳು ನೀಡುವ ಶಿಫಾರಸುಗಳನ್ನು ಜಾರಿಗೆ ತರುವ ಸರ್ಕಾರಗಳನ್ನು ಅಧಿಕಾರಕ್ಕೇರಿಸಿದರೆ ಮಾತ್ರ ಜನರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ವೈಚಾರಿಕ ಶಿಕ್ಷಣ ಬೇಕು: ನಾವು ಇನ್ನೂ ಓಬೀರಾಯನ ಕಾಲದ ಶಿಕ್ಷಣ ನೀಡುತ್ತಿದ್ದೇವೆ. ಗುಲಾಮ ಗಿರಿ ಶಿಕ್ಷಣದ ವ್ಯವಸ್ಥೆಯಿಂದಾಗಿ ಅತ್ಯಾಚಾರ ದೌರ್ಜನ್ಯ ಪ್ರಕರಣ ಹೆಚ್ಚಾಗಿ ನಡೆಯುತ್ತವೆ ಎಂದು ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಶೋಧಕಿ ಟಿ. ಪದ್ಮಶ್ರೀ ಅಭಿಪ್ರಾಯ ಪಟ್ಟರು.
ವಿಚಾರ ಮಂಡನೆ ಮಾಡಿದ ಪದ್ಮಶ್ರೀ ಪುರುಷ ಹಾಗೂ ಮಹಿಳಾ ಪ್ರಧಾನ ವ್ಯವಸ್ಥೆ ಎರಡೂ ಅಪಾಯಕಾರಿ. ಸಮಾನ ಮನಃಸ್ಥಿತಿಯ ಸಮಾಜ ನಮಗೆ ಬೇಕಿದೆ. ಮಕ್ಕಳಿಗೆ ನೈತಿಕ ಶಿಕ್ಷಣದ ಕೊರತೆ ಇದೆ. ಈ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದರು
ತೊಲಗಬೇಕು: ಬ್ರಿಟಿಷರ ಕಾಲ ಶಿಕ್ಷಣದ ಪದ್ಧತಿ ತೊಲಗಬೇಕು. ಪ್ರಗತಿಪರ ಮತ್ತು ವೈಚಾರಿಕ ಶಿಕ್ಷಣ ನೀಡುವ ಪ್ರಯತ್ನ ಇದುವರೆಗೂ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಪದ್ಧತಿ ಬದಲಾಗಬೇಕಿದೆ ಎಂದು ಪ್ರತಿಪಾದಿಸಿದರು.
ಮಹಿಳೆಯರನ್ನು ಸ್ವಾತಂತ್ರ್ಯ, ಸ್ವಾಯತ್ತ ಘಟಕದ ಬದಲು ಬೇರೆಯದೇ ರೀತಿಯಲ್ಲಿ ನೋಡಲಾಗುತ್ತಿದೆ. ಬಹುತೇಕ ಮಂದಿ ತಮ್ಮ ಪತ್ನಿಯನ್ನು ಕುಟುಂಬ ಎಂದಷ್ಟೇ ಪರಿಚಯಿಸುತ್ತಾರೆ. ಇದು ಮೊದಲು ಕೊನೆಯಾಗಬೇಕು. ಪತ್ನಿಯೂ ಒಂದು ಜೀವ, ಆಕೆಯನ್ನು ವ್ಯಕ್ತಿಯಾಗಿ ಪರಿಗಣಿಸದಿರುವುದು ನೋವಿನ ಸಂಗತಿ. ಯಾವುದೇ ಧರ್ಮ ಮಹಿಳೆಗೆ ಸೂಕ್ತ ಸ್ಥಾನಮಾನ ಕಲ್ಪಿಸಿಲ್ಲ. ಎಲ್ಲವೂ ಮಹಿಳಾ ವಿರೋಧಿ, ಶೋಷಕ ಹಾಗೂ ಪೀಡಕ ಧರ್ಮಗಳೇ ಆಗಿವೆ ಎಂದು ನೊಂದ ಮನಸ್ಸಿನಿಂದ ಹೇಳಿದರು.
ಮಂಜುಳಾಗೆ ಸನ್ಮಾನ: ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರಿಗೆ ತವರಿನ ಅಭಿನಂದನೆ ಸಲ್ಲಿಸಲಾಯಿತು. ನಾನಾ ಸಂಘಟನೆಗಳ ಪರವಾಗಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಮಂಜುಳಾ ಅವರನ್ನು ಅಭಿನಂದಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಸಂಚಾಲಕಿ ಸಿ.ಕುಮಾರಿ, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement