ಬಾರದ ಮಳೆ, ಶೇ. 75 ರಷ್ಟು ಬೆಳೆ ನಾಶ
-ಪಿ.ಶಾಂತಕುಮಾರ್
ಅರಸೀಕೆರೆ: ರಾಜ್ಯದ ಕೆಲವೆಡೆ ಸಾಕಪ್ಪ ಸಾಕು ಎನ್ನುವಷ್ಟು ಮಳೆ ಸುರಿಯುತ್ತಿದ್ದರೂ ಸತತ ಬರಗಾಲ, ಮಳೆಯ ಅಭಾವದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಾಲೂಕು ರೈತರಿಗೆ ಈ ಬಾರಿಯ ಮುಂಗಾರು ತನ್ನ ಮುನಿಸನ್ನು ಮುಂದುವರಿಸಿದ್ದು ಕೆಲವು ಭಾಗದಲ್ಲಿ ಶೇ.75ರಷ್ಟು ಬೆಳೆ ನಾಶವಾಗಿದೆ.
ಮೇನಲ್ಲಿ ಬಂದ ಸೋನೆ ಮಳೆಗೆ ಈ ಭಾಗದ ಪ್ರಮುಖ ಬೆಳೆಗಳಾದ ಹೆಸರು, ಉದ್ದು, ತೊಗರಿ, ಎಳ್ಳು, ಹಲಸಂದೆ, ಸೂರ್ಯಕಾಂತಿ, ಹೈಬ್ರಿಡ್ ಜೋಳ ಹಾಗೂ ಇನ್ನಿತರೆ ಬೆಳೆಗಳನ್ನು 21366 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ಕೆಲವೆಡೆ ಮಳೆಯಾಗದೆ 16,400 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದ್ದು ಮಳೆಯ ಅಭಾವದಿಂದ ಬಹುತೇಕ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದ್ದಾರೆ.
ರಾಗಿ ಬಿತ್ತನೆ: ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ಮಳೆ ಕೈಕೊಟ್ಟ ಕಾರಣ ಕೈಯಲ್ಲಿದ್ದ ಹಣವನ್ನೂ ಕಳೆದುಕೊಂಡು ಬರಿಗೈ ಆಗಿದ್ದಾರೆ. ಮಳೆಗಾಗಿ ಹಂಬಲಿಸುತ್ತಿರುವ ರೈತರು ಆಕಾಶದತ್ತ ಮುಖಮಾಡಿ ಮಳೆ ಇಂದು ಬರುವುದೋ ನಾಳೆ ಬರುವುದೋ ಎಂಬ ನಿರೀಕ್ಷೆಯಲ್ಲಿ ಬದುಕು ಸಾಗಿಸುತ್ತಿದ್ದು ಜುಲೈನಲ್ಲಿ 8665 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.
ಮಳೆಯ ಅಭಾವದಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆ ಹಾನಿಯಿಂದ ಚಿಂತೆಗೀಡಾಗಿದ್ದಾರೆ. ಮಹಾಮಾರಿಯಂತೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಲೂ ಮಳೆಯಾಗದಿದ್ದರೆ ಬದುಕಿಗಾಗಿ ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಹೈನುಗಾರಿಕೆಗೂ ತೊಂದರೆ: ಮಳೆಯ ಅಭಾವ ರೈತರ ಇನ್ನೊಂದು ಆರ್ಥಿ ಮೂಲವಾದ ಹೈನುಗಾರಿಕೆಯ ಮೇಲೂ ದುಷ್ಪರಿಣಾಮ ಬೀರಿದೆ. ಒಂದೆಡೆ ನೀರಿನ ಸಮಸ್ಯೆಯಾದರೆ ಇನ್ನೊಂದೆಡೆ ಮೇವಿನ ಸಮಸ್ಯೆ ಎದುರಾಗಿದೆ. ಈ ಹಿಂದೆ ಇಂತಹ
ಬರಗಾಲದ ಪರಿಸ್ಥಿತಿ ಎದುರಾದಾಗ ಗುಡ್ಡಗಾಡುಗಳಿಗೆ ಜಾನುವಾರುಗಳೊಂದಿಗೆ ವಲಸೆಹೋಗಿ ಅವನ್ನು ರಕ್ಷಿಸಿಕೊಳ್ಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು ಅಲ್ಲೂ ತೇವಾಂಶ ಕೊರತೆಯಿಂದ ಮೇವು ದೊರೆಯುತ್ತಿಲ್ಲ. ಇನ್ನು ಸರ್ಕಾರ ಮೇವು ಒದಗಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಗೋಶಾಲೆಗಳೂ ಮುಚ್ಚಿದ್ದರಿಂದ ಮತ್ತಷ್ಟು ನಿರಾಸೆಯಾಗಿದೆ.ಉತ್ತಮ ವ್ಯಾಪಾರದ ನಿರೀಕ್ಷೆಯಿಂದ ಲಕ್ಷಾಂತರ ರು. ಬಂಡವಾಳ ಹಾಕಿ ಬೀಜಗೊಬ್ಬರ ಔಷಧಿ ದಾಸ್ತಾನುಮಾಡಿಕೊಂಡಿದ್ದ ವ್ಯಾಪಾರಸ್ಥರು ತಲೆಯ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಒಟ್ಟಿನಲ್ಲಿ ಈ ಮಳೆ ಅಭಾವದಿಂದ ಅನ್ನದಾತ ಮತ್ತು ವ್ಯಾಪಾರಸ್ಥರು, ಜಾನುವಾರುಗಳು ಕೃಷಿ ಮಾರುಕಟ್ಟೆ ಏಕಕಾಲದಲ್ಲಿ ನಾಲ್ಕು ವರ್ಗಗಳೂ ನಲಿಗಿಹೋಗಿವೆ.
ಮಳೆ ಪ್ರಮಾಣ: 2010ರ ಮೇ 129.5 ಮಿ.ಮೀ, ಜೂನ್‌ನಲ್ಲಿ 59.1, ಜುಲೈನಲ್ಲಿ 133.90 ಮಿ.ಮೀ ಮಳೆಯಾಗಿದ್ದರೆ, ಮೇ 2011ರಲ್ಲಿ 97.5 ಮಿ.ಮೀ, ಜೂನ್‌ನಲ್ಲಿ 31.01 ಮಿ.ಮೀ, ಜುಲೈನಲ್ಲಿ 55.8 ಮಿ.ಮೀ ಮಳೆಯಾಗಿದ್ದರೆ 2012ರ ಮೇನಲ್ಲಿ 28.8 ಮಿ.ಮೀ, ಜೂನ್‌ನಲ್ಲಿ 20.6 ಮಿ.ಮೀ, ಜುಲೈ 37 ಮಿ.ಮೀ. ಮಳೆಯಾಗಿದ್ದರೆ 2013ರಲ್ಲಿ ಮೇ 67, ಜೂನ್ 55, 2014 ಜನವರಿಯಿಂದ ಈವರೆಗೆ 228.8 ಮಿ.ಮೀ ಮಳೆಯಾಗಿದ್ದು ಸಂಪೂರ್ಣ ಬೆಳೆ ನಾಶದಿಂದ ತತ್ತರಿಸಿರುವ ರೈತರ ನೆರವಿಗೆ ಧಾವಿಸಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವರೇ ಎಂಬುದು ಅನ್ನದಾತನ ಪ್ರಶ್ನೆಯಾಗಿದೆ.