ಶ್ರದ್ಧೆ, ಸಂಭ್ರಮದಿಂದ ರಂಜಾನ್ ಆಚರಣೆ
ಶ್ರೀರಂಗಪಟ್ಟಣ: ತಾಲೂಕಿನಾದ್ಯಂತ ಮುಸ್ಲಿಮರು ಮಂಗಳವಾರ ಶ್ರದ್ಧೆ ಮತ್ತು ಸಂಭ್ರಮದ ರಂಜಾನ್ ಆಚರಣೆ ಮಾಡಿದರು. ಪಟ್ಟಣದ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಬಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು. ಪಟ್ಟಣದ ಅಕ್ಕ ಪಕ್ಕದ ಗ್ರಾಮಗಳಾದ ಶೆಟ್ಟಹಳ್ಳಿ, ಬಾಬುರಾಯನ ಕೊಪ್ಪಲು, ಪಾಲಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲೂ ಕೂಡ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಮುಸ್ಲಿಂ ಧರ್ಮ ಗುರುಗಳು ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು. ಮುಂಜಾಗೃತ ಕ್ರಮವಾಗಿ ಪೊಲೀಸರು ಈದ್ಗಾ ಮೈದಾನದಲ್ಲಿ ಭಾರಿ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.
ಮಾಧ್ಯಮ ಪ್ರತಿನಿಧಿಗಳ ಮೇಲೆ ಎಂಇಎಸ್ ಪುಂಡಾಟಿಕೆ: ಖಂಡನೆ
ಮಂಡ್ಯ: ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವ ಎಂಇಎಸ್ ಪುಂಡಾಟಿಕೆಯನ್ನು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘ, ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ಯಳ್ಳೂರಿನಲ್ಲಿ ಕಳೆದ ಒಂದು ವಾರಗಳಿಂದ ಮರಾಠಿಗರ ಉಪಟಳ ಎಲ್ಲೆ ಮೀರಿದೆ. ಈ ಕುರಿತು ಸುದ್ದಿ ಮಾಡಲು ತೆರಳಿದ್ದ ಕನ್ನಡ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿ ಕೂಡಿ ಹಾಕಿ ದೌರ್ಜನ್ಯ ಎಸಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ ಎಂದಿದ್ದಾರೆ.
ಈ ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಬೆಳಗಾವಿಯಲ್ಲಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಪ್ರತಿನಿತ್ಯ ಕ್ಯಾತೆ ತೆಗೆಯುವ ಎಂಇಎಸ್ ಪುಂಡರನ್ನು ಬಂಧಿಸಬೇಕು. ಜೊತೆಗೆ ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಹಾಗೂ ಗಡಿ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದೆ.
ಮೀನುಗಾರಿಕೆ ಕೈಗೊಳ್ಳಲು ಅರ್ಜಿ ಆಹ್ವಾನ
ಮಂಡ್ಯ: ಕೆ.ಆರ್.ಎಸ್ ಜಲಾಶಯದಲ್ಲಿ ಮೀನುಗಾರಿಕೆ ಕೈಗೊಳ್ಳಲು ಬೇಕಾದ ಗುರುತಿನ ಚೀಟಿ ಪಡೆಯಲು ಮೀನುಗಾರಿಕೆ ಕಚೇರಿಯಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಪಡೆಯಲು ವಾಸ ಸ್ಥಳ ದೃಢೀಕರಿಸುವ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ 2 ಇತ್ತೀಚಿನ ಭಾವಚಿತ್ರ ಹಾಗೂ ಮೀನುಗಾರರು ಎಂದು ಗುರುತಿಸುವ ದೃಢೀಕೃತ ದಾಖಲಾತಿಗಳೊಂದಿಗೆ ಮೀನುಗಾರಿಕೆ ಕಚೇರಿಗೆ ನೀಡಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ನೀಡಿ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಕೆ.ಆರ್.ಸಾಗರದ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಖಿಲ ಭಾರತ ಕೃಷಿ ಕೂಲಿಕಾರರ ಸಮ್ಮೇಳನ
ಮಳವಳ್ಳಿ: ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ 8ನೇ ರಾಷ್ಟ್ರ ಸಮ್ಮೇಳನ ತೆಲಂಗಾಣ ರಾಜ್ಯದ ವಾರಂಗಲ್ನಲ್ಲಿ ಆ.2ರವರೆಗೆ ನಡೆಯಲಿದೆ.
ಜಿಲ್ಲಾ ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಪುಟ್ಟಮಾದು, ಕಾರ್ಯದರ್ಶಿ ಕೆ.ಬಸವರಾಜು, ತಾಲೂಕು ಸಮಿತಿ ಅಧ್ಯಕ್ಷೆ ಸರೋಜಮ್ಮ, ಮದ್ದೂರು ತಾಲೂಕು ಕಾರ್ಯದರ್ಶಿ ಬಿ. ಹನುಮೇಶ್, ಮಂಡ್ಯ ತಾಲೂಕು ಅಧ್ಯಕ್ಷ ಅಬ್ದುಲ್ಲಾ, ಕೆ.ಹನುಮೇಗೌಡ, ಸುರೇಂದ್ರ, ಚಂದ್ರು ಅವರು ತೆರಳಿ ಕೂಲಿಕಾರರ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ
ಮಂಡ್ಯ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಶಾಖೆ ವತಿಯಿಂದ ಜು.30 ಮತ್ತು 31 ರಂದು ಕರ್ನಾಟಕ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಎಸ್.ಬಿ. ಸಮುದಾಯ ಭವನದಲ್ಲಿ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕಾರ್ಯಾಗಾರದಲ್ಲಿ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಎನ್ಎಸ್ಎಸ್, ಎನ್ಸಿಸಿ ಮತ್ತು ಯೂತ್ ರೆಡ್ ಕ್ರಾಸ್, ರೂವರ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್ ಕಾರ್ಯಾಗಾರವನ್ನು ಉದ್ಘಾಟಿಸುವರು.
ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ ಅಧ್ಯಕ್ಷತೆ ವಹಿಸಲಿದ್ದು, ಜಿಪಂ ಸಿಇಒ ರೋಹಿಣಿ ಸಿಂಧೂರಿ, ವಿಪತ್ತು ನಿರ್ವಹಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಕುಮಾರ್.ಎಲ್.ಎಸ್ ಭಾಗವಹಿಸುವರು ಪ್ರಕಟಣೆ ತಿಳಿಸಿದೆ.
ತ್ರಿಫೇಸ್ ವಿದ್ಯುತ್ಗೆ ಮಂಜುನಾಥ್ ಒತ್ತಾಯ
ಮಂಡ್ಯ: ಸರ್ಕಾರ ಘೋಷಣೆ ಮಾಡಿದಂತೆ ಗ್ರಾಮೀಣ ಪ್ರದೇಶಗಳಿಗೆ ಪ್ರತಿ ದಿನ ಹಗಲಿನ ವೇಳೆ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಸಿ.ಟಿ.ಮಂಜುನಾಥ್ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರಿಗೆ ಸಮಸ್ಯೆಯಾಗಿದೆ. ರೈತರ ಪಂಪ್ಸೆಟ್ಗಳಿಗೆ 6 ಗಂಟೆ ತ್ರಿ ಫೇಸ್ ನೀಡುವುದಾಗಿ ಹೇಳಿದ್ದ ಸರ್ಕಾರ ತಮ್ಮ ಮಾತಿನಂತೆ ನಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಸುಟ್ಟು ಹೋದ ಟಿಸಿಗಳನ್ನು ಸರಿಪಡಿಸಬೇಕು. ಉತ್ತಮ ಗುಣ ಮಟ್ಟದ ಟಿಸಿ ಅಳವಡಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಲೈಂಗಿಕ ಶೋಷಣೆ ಕುರಿತು ಸಂವಾದ: ಮಂಡ್ಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಜು.31 ರಂದು ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಮಾನವ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸಂವಾದವನ್ನು ಆಯೋಜಿಸಲಾಗಿದೆ ಎಂದು ಓಡಿಪಿ ಸಂಸ್ಥೆಯ ಸಿ.ಪಿ.ಕವಿತಾ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಮಳವಳ್ಳಿ: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮರಿದೇವರು, ಉಪಾಧ್ಯಕ್ಷರಾಗಿ ಎಲ್. ನಿಂಗರಾಜು, ಕಾರ್ಯದರ್ಶಿಯಾಗಿ ಬಿ.ಎಸ್. ಸುರೇಶ್, ಸಹ ಕಾರ್ಯದರ್ಶಿಯಾಗಿ ನಾಗರಾಜು, ಸಂಘಟನಾ ಕಾರ್ಯದರ್ಶಿಗಳಾಗಿ ಆರ್.ಹನುಮಂತ, ಖಜಾಂಚಿಯಾಗಿ ವೈ.ಎಸ್.ಸ್ವಾಮಿ, ರಾಜ್ಯ ಪರಿಷತ್ ಸದಸ್ಯರಾಗಿ ಕೃಷ್ಣೇಗೌಡ ಹಾಗೂ ನಿರ್ದೇಶಕರಾಗಿ ಬಿ.ಆರ್. ಪ್ರಸನ್ನ, ಪ್ರಸಾದ್, ಸಿ.ಮಹೇಶ್ ಆಯ್ಕೆಯಾಗಿದ್ದಾರೆ. ಚುನಾವಣಾಕಾರಿಯಾಗಿ ಪನ್ಯಾಸಕ ಎಚ್.ವಿ.ನಿಂಗರಾಜು ಕರ್ತವ್ಯ ನಿರ್ವಹಿಸಿದರು.