ಸಂಭ್ರಮದಿಂದ ರಂಜಾನ್ ಆಚರಣೆ
ಅರಸೀಕೆರೆ: ಧಾನ, ಧರ್ಮ, ಪರೋಪಕಾರ, ಹಾಗೂ ಸಾತ್ವಿಕತೆಯ ಸಂದೇಶ ಸಾರುವ ರಂಜಾನ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಜನಾಂಗದವರು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಪಟ್ಟಣದ ಈದ್ಗಾ ಮೈದಾನದಲ್ಲಿ ಪೂರ್ವಿಕರಿಗೂ ಹಾಗೂ ಸಂಬಂಧಿಕರಿಗೂ ಪರಸ್ಪರ ನಮನ ಸಲ್ಲಿಸಿದರು.
ಆರಂಭದಿಂದಲೂ ಒಂದು ತಿಂಗಳಿನಿಂದಲೂ ಉಪವಾಸದಲ್ಲಿ ತೊಡಗಿದ್ದ ಮುಸಲ್ಮಾನರು ಮಂಗಳವಾರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಉಪವಾಸವನ್ನು ಮುಕ್ತಾಯಗೊಳಿಸಿದರು. ಜಾಮೀಯಾ ಮಸೀದಿಯಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಬಿಗಿ ಭದ್ರತೆ: ರಂಜಾನ್ ಪ್ರಯುಕ್ತ ಪಟ್ಟಣದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಭಾರಿ ಬಿಗಿ ಭದ್ರತೆ ಏರ್ಪಡಿಸಿದ್ದರು. ಭಾವೈಕ್ಯತೆ ಭಕ್ತಿಯ ಪರಾಕಾಷ್ಟೆಯನ್ನು ಮೆರೆಯುವ ರಂಜಾನ್ ತಿಂಗಳಿನ ಆಚರಣೆಯನ್ನು ಪಟ್ಟಣದ ಮುಸಲ್ಮಾನರು ಆಚರಿಸಿ ದಾನ ಧರ್ಮಗಳಲ್ಲಿ ಪಾಲ್ಗೊಂಡಿದ್ದರು.
ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಶೀಲ್ದಾರ್ ನಟರಾಜ್, ಪುರಸಭಾಧ್ಯಕ್ಷ ಮೋಹನ್ ಕುಮಾರ್, ಸದಸ್ಯ ಪಂಚಾಕ್ಷರಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಮೀವುಲ್ಲಾ ಪಾಲ್ಗೊಂಡಿದ್ದರು.
ಪರಸ್ಪರ ಶುಭ ಕೋರಿ ಪ್ರಾರ್ಥನೆ
ಜಾವಗಲ್: ಜಾವಗಲ್‌ನ ಪ್ರಸಿದ್ಧ ಬಾಬಾರವರ ದರ್ಗಾದಲ್ಲಿ ಮಂಗಳವಾರ ರಂಜಾನ್ ಹಬ್ಬವು ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಮುಂಜಾನೆಯಿಂದಲೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಮುಸ್ಲೀಂ ಬಾಂಧವರು ದರ್ಗಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಬಾಬಾರವರ ಸಮಾಧಿಗೆ ಭೇಟಿ ನೀಡಿ ಪುಷ್ಪಗುಚ್ಚಗಳನ್ನು ಇಟ್ಟು ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದರ್ಗಾ ಟ್ರಸ್ಟಿನ ಪದಾಧಿಕಾರಿಗಳು, ಮೌಲಾನಗಳು, ಮದರಸಾ ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು. ಹಬ್ಬದ ಅಂಗವಾಗಿ ಟ್ರಸ್ಟ್ ವತಿಯಿಂದ ಬಡಬಗ್ಗರಿಗೆ ಬಟ್ಟೆಗಳನ್ನು ವಿತರಿಸಲಾಯಿತು.