ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಫೀಡರ್‌ಗಳು

Srinivasa Murthy VN
Updated On : 1 Jun 2014, 11:45 am

ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಹೊಳೆನರಸೀಪುರ  ಪುರಸಭೆಯೂ ತನ್ನ ವ್ಯಾಪ್ತಿಗೆ ತೆಗೆದುಕೊಂಡಿಲ್ಲ, ವಿದ್ಯುತ್ ಇಲಾಖೆ ನಿರ್ವಹಣೆಯನ್ನು ಪುರಸಭೆಗೆ ವಹಿಸಿಲ್ಲ. ಆದರೆ ಪಟ್ಟಣದ ಪೇಟೆ ಮುಖ್ಯ ರಸ್ತೆ ಮತ್ತು ಕೋಟೆ ಮುಖ್ಯ ರಸ್ತೆಯ ಬದಿಗಳಲ್ಲಿ ಹಾಕಿರುವ ಭೂಗತ ವಿದ್ಯುತ್ ಕೇಬಲ್‌ನ ಫೀಡರ್ ಬಾಕ್ಸ್‌ಗಳು ಮುರಿದು ಹಾಳಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ.
ಈಗ್ಗೆ ಕೆಲವು ವರ್ಷಗಳ ಹಿಂದೆ ಪಟ್ಟಣದ ಪೇಟೆ ಮತ್ತು ಕೋಟೆಯ ಮುಖ್ಯ ರಸ್ತೆಗಳನ್ನು ಕಾಂಕ್ರೀಟಟ್ರಸ್ತೆಗಳನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಸದರಿ ರಸ್ತೆಗಳ ಇಕ್ಕೆಲಗಳಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ರಸ್ತೆಯ ಅಕ್ಕ-ಪಕ್ಕದ ಮನೆ ಹಾಗೂ ವಾಣಿಜ್ಯ ಮಳಿಗೆಗಳ ವಿದ್ಯುತ್ ಸಂಪರ್ಕವನ್ನು ಭೂಗತ ಕೇಬಲ್ ಅಳವಡಿಸಿ ಮನೆಗಳಿಗೆ ಸಂಪರ್ಕ ನೀಡಲಾಗಿತ್ತು. ಅಲ್ಲದೇ ಈ ಸಂಪರ್ಕಗಳ ಹಾಗೂ ಬೀದಿ ದೀಪಗಳ ಮೈನ್ಸ್‌ಗಳನ್ನು ಪೇಟೆ ಮತ್ತು ಕೋಟೆಯಲ್ಲಿನ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ಫೀಡರ್ ಬಾಕ್ಸ್‌ಗಳಲ್ಲಿ   ಇರಿಸಲಾಗಿತ್ತು.
ಭೂಗತ ಕೇಬಲ್ ಅಳವಡಿಕೆಯ ಕಾಮಗಾರಿಯನ್ನು ನಿರ್ವಹಿಸಿದ ನಂತರ ಅದರ ಉಸ್ತುವಾರಿಯನ್ನು ವಿದ್ಯುತ್ ಇಲಾಖೆ ಇಲ್ಲಿನ ಪುರಸಭೆಗೆ ಅಧಿಕೃತವಾಗಿ ವಹಿಸಿಕೊಟ್ಟಿಲ್ಲ ಎನ್ನಲಾಗಿದೆ. ಅದೇ ರೀತಿ ಪುರಸಭೆಯೂ ಅಧೀಕೃತವಾಗಿ ಈ ಕಾಮಗಾರಿ ಮುಗಿದ ನಂತರ ನಿರ್ವಹಣೆಯ ಜವಾಬ್ದಾರಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಆದರೂ ಈ ಎರಡು ಸಂಸ್ಥೆಗಳ ತಿಕ್ಕಾಟದ ನಡುವೆ ಹಲವು ವರ್ಷಗಳೇ ಕಳೆದು ಅಳವಡಿಸಲಾಗಿದ್ದ ವಿದ್ಯುತ್ ಫೀಡರ್ ಬಾಕ್ಸ್‌ಗಳು ಹಾಳಾಗಿ ಮುರಿದು ಬೀಳತೊಡಗಿವೆ. ವಿದ್ಯುತ್ ಫೀಡರ್ ಬಾಕ್ಸ್‌ಗಳು ದುಸ್ಥಿತಿಯಲ್ಲಿದ್ದು, ಇದರಲ್ಲಿ ಬೀದಿ ದೀಪ ಹಾಗೂ ಮನೆಗಳ ಸಂಪರ್ಕಗಳೂ ಸೇರಿದೆ ಎನ್ನಲಾಗಿದ್ದರೂ, ಫೀಡರ್ ಬಾಕ್ಸ್‌ಗಳಲ್ಲಿನ ವಿದ್ಯುತ್ ಪರಿಕರಗಳು ಅಪಾಯಕಾರಿಯಾಗಿ ತೆರೆದುಕೊಂಡಿದ್ದು, ಯಾವುದೇ ಸಣ್ಣ ಮಗುವಾಗಲೀ, ಪ್ರಾಣಿಗಳಾಗಲೀ ಮುಟ್ಟಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ಕುರಿತಂತೆ ಇಲ್ಲಿನ ಪೇಟೆ ಬೀದಿಯ ನಿವಾಸಿಗಳು ಹಾಗೂ ಕೋಟೆ ಬೀದಿಯ ನಿವಾಸಿಗಳೂ ಕೂಡ ಪುರಸಭೆ ಹಾಗೂ ವಿದ್ಯುತ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಪುರಸಭೆಯವರಾಗಲೀ, ಇಲ್ಲವೇ ವಿದ್ಯುತ್ ಇಲಾಖೆಯವರಾಗಲೀ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ವಿದ್ಯುತ್ ಸಂಪರ್ಕದ ಸುರಕ್ಷತೆಗೆ ಆದ್ಯತೆ ನೀಡಬೇಕು.
-ಕುಮಾರ್, ಮಹಮದ್ ಮುಜಾಹಿದ್, ಸುಧಾಕರ್, ರಂಗನಾಥ್, ಕಿಟ್ಟಪ್ಪ, ನಿವಾಸಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement