ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮರಳು ದಂಧೆ, ವಿದ್ಯುತ್ ಸಮಸ್ಯೆ, ಅಕ್ಷರದಾಸೋಹದಲ್ಲಿ ಅಕ್ರಮ: ಸದಸ್ಯರ ಆಕ್ರೋಶ

Srinivasa Murthy VN
Updated On : 1 Jun 2014, 11:44 am

ಬೇಲೂರು: ಕಳ್ಳೇರಿ, ನಾರಾಯಣಪುರ, ಪಡುವಳಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರು ಸರಬರಾಜು ವ್ಯವಸ್ಥೆಗೆ ಪೈಪ್‌ಲೈನ್ ಅಳವಡಿಸುವ ಕಾರ್ಯ ಮುಗಿದಿದ್ದರೂ ವಿದ್ಯುತ್ ಸಂಪರ್ಕ ಕೊಡುವಲ್ಲಿ ಉದಾಸೀನ ತೋರುತ್ತಿರುವುದರಿಂದ ಸಮಸ್ಯೆ ಉಂಟಾಗಿರುವ ಬಗ್ಗೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷೆ ಶೋಭ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ಥಾಪಿಸಿದ ಸದಸ್ಯ ರವಿಕುಮಾರ್, ತಾಲೂಕಿನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದ್ದು ವಿದ್ಯುತ್ ಇಲಾಖೆಯ ಸ್ಥಳೀಯ ಕಚೇರಿಯಲ್ಲಿ ಲೈನ್‌ಮೆನ್‌ಗಳು ಅಧಿಕಾರಿಗಳನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಲೈನ್‌ಮೆನ್‌ಗಳು ಹಾಗೂ ಗುತ್ತಿಗೆದಾರರು ಒಳಒಪ್ಪಂದ ಮಾಡಿಕೊಂಡು ಗ್ರಾಹಕರ ಕೆಲಸವನ್ನ ನಿಯಮ ಮೀರಿ ಮಾಡಿಕೊಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳ ಪಾಲೂ ಇದೆ ಎಂದು ಸದಸ್ಯ ಪರ್ವತಯ್ಯ ಆರೋಪಿಸಿದರು.
ಸದಸ್ಯ ಶೇಖರಯ್ಯ, ವಿದ್ಯುತ್ ಕಂಬ ನೆಡುವಾಗ 5 ಅಡಿ ಆಳದ ಗುಂಡಿ ತೋಡಬೇಕು. ಆದರೆ ಹಣ ಉಳಿಸಲು ಕೇವಲ 2 ರಿಂದ 3 ಅಡಿ ಆಳ ಗುಂಡಿ ತೆಗೆದು ಕಂಬ ಹೂಳಿರುವುದರಿಂದ ಕೆಲವು ಭಾಗದಲ್ಲಿ ಕಂಬಗಳು ಬಿದ್ದುಹೋಗಿದೆ. ಕೆಇಬಿ ಅಧಿಕಾರಿಗಳ ಧೋರಣೆ ಇದೆ ರೀತಿ ಮುಂದುವರಿದರೆ ಕೆಇಬಿ ಕಚೇರಿ ಮುಂದೆ ತಾಪಂ ಸದಸ್ಯರು ಧರಣಿ ನಡೆಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಆರೋಗ್ಯ ಇಲಾಖೆ: ಹವಾಮಾನ ವೈಪರೀತ್ಯದಿಂದಾಗಿ ಕಾಲರ, ಮಲೇರಿಯಾ ರೋಗ ಹರಡದಂತೆ ಗ್ರಾಮೀಣ ಭಾಗದಲ್ಲಿನ ನೀರು ಪರೀಕ್ಷೆಗೊಳಪಡಿಸಿ ಕ್ರಮ ಕೈಗೊಳ್ಳಲಾಗುವುದು. ಮಂಗಳೂರಿಗೆ ಹೋಗಿ ಬಂದಂಥ 5 ಜನರಿಗೆ ಮಲೇರಿಯ ರೋಗ ಪತ್ತೆಯಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಆಂದೋಲನ ನಡೆಸಲಾಗುತ್ತಿದೆ. ಹೊಸದಾಗಿ ನಗುಮಗು, ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದು ವೈದ್ಯಾಧಿಕಾರಿ ಸಂಧ್ಯಾ ಸಭೆ ಗಮನಕ್ಕೆ ತಂದರು.
ಆಸ್ಪತ್ರೆಯಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿದ್ದು ಸ್ವಚ್ಚಗೊಳಿಸುವಂತೆ ಸದಸ್ಯೆ ಕಮಲಚನ್ನಪ್ಪ ಸೂಚಿಸಿದರು. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಕೊರತೆಯಿದೆ. ಇದರಿಂದ ಜನರಿಗೆ ತೊಂದರೆ ಉಂಟಾಗಿದೆ ಎಂದು ಗಂಗಮ್ಮ ದೂರಿದರು.
ಅಕ್ಷರದಾಸೋಹದಲ್ಲಿ ಅಕ್ರಮ: ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳು ಬರುತ್ತಿಲ್ಲವಾದರೂ ಸುಳ್ಳು ದಾಖಲೆ ಸೃಷ್ಠಿಸಿ ಹಣ ಹೊಡೆಯಲಾಗುತ್ತಿದೆ. ಕಡಿಮೆ ಮಕ್ಕಳು ಬರುವ ಶಾಲೆಗಳಲ್ಲಿ ಸಹ ಇದೆ ರೀತಿ ಆಗುತ್ತಿದೆ. ಸಿಲಂಡರ್‌ಗಳು ಸಹ ಶಿಕ್ಷಕರ ಮನೆ ಪಾಲಾಗುತ್ತಿವೆ. ಅಕ್ಷರ ದಾಸೋಹ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಂದು ಸದಸ್ಯರಾದ  ಗಂಗಮ್ಮ, ಮೋಹನ್, ಪೂರ್ಣಿಮ, ನಳಿನಿ ಆರೋಪಿಸಿದರಲ್ಲದೆ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು, ಅಡುಗೆಯವರು ಕೆಲಸದ ವೇಳೆ ಹಾಸ್ಟೆಲ್‌ನಲ್ಲಿ ಇರುವುದಿಲ್ಲ. ಎಂದು 3 ವರ್ಷದಿಂದ ಹೇಳುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಮೋಹನ್ ಆರೋಪಕ್ಕೆ ಸರ್ವ ಸದಸ್ಯರು ಧ್ವನಿಗೂಡಿಸಿದರು.
ತಾಪಂಗೆ ಸೇರಿ ಡಾ.ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ನಿವೇಶನವನ್ನ ಡಾ.ಅಂಬೇಡ್ಕರ್ ಟ್ರಸ್ಟ್ ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಹಾಗೂ ತಾ.ಪಂ.ಗೆ ಸೇರಿದ ನಿವೇಶನ ಎಲ್ಲೆಲ್ಲಿ ಇದೆ ಎಂಬುದನ್ನ ಸಂಪೂರ್ಣ ಸರ್ವೆ ಮಾಡಿಸುವಂತೆ ಆಗ್ರಹ ಕೇಳಿಬಂತು.
ಮರಳುದಂಧೆ: ರಾತ್ರಿವೇಳೆ ಅಕ್ರಮ ಮರಳು ತುಂಬಿದ ಲಾರಿಗಳು ಸಂಚರಿಸುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಮರಳು ಅಕ್ರಮ ಸಾಗಾಣೆಯಲ್ಲಿ ವಿವಿಧ ಅಧಿಕಾರಿಗಳು ಶಾಮೀಲಾಗಿ ಹಣ ಹೊಡೆಯುತ್ತಿದ್ದಾರೆ. ತಾಲೂಕಿನಲ್ಲಿ 3 ಮರಳು ಪಾಯಿಂಟ್‌ಗಳನ್ನು ಪರಿಶಿಷ್ಟಜಾತಿ, ವರ್ಗದವರಿಗೆ ಟೆಂಡರ್ ನೀಡಿದ್ದರೂ, ಸಹ ಆ ಸ್ಥಳದಲ್ಲಿ ಮರಳು ತುಂಬಲು ಅವಕಾಶ ಕೊಡುತ್ತಿಲ್ಲ. ಇಲ್ಲಿಯೂ ಕೆಳವರ್ಗದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದರೆ ಉಡಾಫೆ ಉತ್ತರ ನೀಡುತ್ತಾರೆಂದು ಪರ್ವತಯ್ಯ ಹೇಳಿದರು.
ಗೆಂಡೇಹಳ್ಳಿ ರಸ್ತೆಯಲ್ಲಿನ ಮೊರಾರ್ಜಿ ವಸತಿ ಶಾಲೆಗೆ ತರಕಾರಿ ಸರಬರಾಜು ಮಾಡುವ ವ್ಯಕ್ತಿ ವಸತಿ ಶಾಲೆಯನ್ನೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಾನೆ. ಇವನು ಹೇಳಿದಂತೆ ಅಲ್ಲಿ ಎಲ್ಲವೂ ನಡೆಯುತ್ತದೆ. ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಪರ್ವತಯ್ಯ ಒತ್ತಾಯಿಸಿದರು.
ತಹಸೀಲ್ದಾರ್ ಭೇಟಿ ಇಲ್ಲ:  ಮಳೆ ಗಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸೌಜನ್ಯಕ್ಕಾದರೂ ಭೇಟಿ ನೀಡದ ತಹಸೀಲ್ದಾರ್ ನೊಂದವರ ವಿರೋಧಿಯಾಗಿದ್ದಾರೆ ಎಂದು ಪರ್ವತಯ್ಯ ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement