ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಗಚಿ ಜಲಾಶಯ ಕಚೇರಿ ಎದುರು ರೈತರ ಪ್ರತಿಭಟನೆ

Srinivasa Murthy VN
Updated On : 1 Jun 2014, 11:45 am

ಬೇಲೂರು: ಕ್ಯಾತನಕೆರೆ ಏತ ನೀರಾವರಿ ಯೋಜನೆಯಿಂದ ಸಾಲಗಾಮೆ ಹೋಬಳಿ ಕೊಂಡಜ್ಜಿ, ಸೀಗೆ ಹಾಗೂ ಸುತ್ತಲಿನ ಗ್ರಾಮಗಳಿಗೆ ಯಗಚಿ ಜಲಾಶಯದ ನೀರು ಹರಿಸುವಂತೆ ಒತ್ತಾಯಿಸಿ ಕೆಪಿಸಿಸಿ ಸದಸ್ಯ ಮಹೇಶ್ ನೇತೃತ್ವದಲ್ಲಿ ಸಾಲಗಾಮೆ ಹೋಬಳಿ ಸಾರ್ವಜನಿಕರು ಶನಿವಾರ ಇಲ್ಲಿನ ಯಗಚಿ ಜಲಾಶಯ ಯೋಜನಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೆಲ ಸಮಯ ಕಚೇರಿ ಮುಂದೆ ಧರಣಿ ನಡೆಸಿದ ಪ್ರತಿಭಟನಕಾರರು ಮುಖ್ಯ ಎಂಜಿನಿಯರ್ ಕೃಷ್ಣೇಗೌಡ ಹಾಗೂ ನೀರಾವರಿ ಸಚಿವರಿಗೆ ದಿಕ್ಕಾರ ಕೂಗಿದರು. ನಂತರ ಮಾತನಾಡಿದ ಕೆಪಿಸಿಸಿ ಸದಸ್ಯ ಮಹೇಶ್, ಹಳೇಬೀಡು ಮಾದಿಹಳ್ಳಿಗೆ ಯಗಚಿ ನೀರು ಕೊಂಡೊಯ್ಯುವ ಏತ ನೀರಾವರಿ ಯೋಜನೆಯ ನಾಲಾ ಕಾಮಗಾರಿ ಮಾದಿಹಳ್ಳಿ ಹೋಬಳಿಯ ಲಕ್ಷ್ಮೀಪುರ ಗ್ರಾಮದವರಗೆ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಆರಂಭಗೊಂಡಿಲ್ಲ. ಮುಂದಿನ ನಾಲೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂಬುದನ್ನು ಎರಡು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ.
ಸೀಗೆ, ಕೊಂಡಜ್ಜಿ ಸುತ್ತಲಿನ ಗ್ರಾಮಗಳ ಕೆರೆಗಳಿಗೆ ನಾಲೆಯಿಂದ ನೀರು ಹರಿಸಬೇಕೆಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ರಾಜ್ಯ ನೀರಾವರಿ ಸಚಿವರು ನೀರಾವರಿಗಾಗಿ ರಾಜ್ಯದಲ್ಲಿ 2 ಸಾವಿರ ಕೋಟಿ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿನ ಈ ನಮ್ಮ ನಾಲೆ ಕೆಲಸ ಆಗಿಲ್ಲ. ರಾಜ್ಯದಲ್ಲಿ ನಮ್ಮದೆ ಸರಕಾರವಿದ್ದರೂ ಈ ರೀತಿ ಏಕೆ ಆಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ 3 ಅಣೆಕಟ್ಟೆಗಳಿರುವುದು ನೀರಾವರಿ ಮಂತ್ರಿಗಳಿಗೆ ಗೊತ್ತಿದೆಯೋ ಇಲ್ಲಮೊ ಎಂಬುದು ನಮ್ಮ ಪ್ರಶ್ನೆ. ನೀರಾವರಿ ಮಂತ್ರಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿ ಕೆಲಸ ಮಾಡಿಸಿಕೊಡಬೇಕು. ನಾವುಗಳು ಚುನಾವಣೆ ಸಂದರ್ಭ ರೈತರಿಗೆ ಹಾಗೂ ಗ್ರಾಮಸ್ಥರಿಗೆ ನೀಡಿದ್ದ ಭರವಸೆ ಹುಸಿಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.
ಸೀಗೆ ಗ್ರಾಮದ ಕಾಂಗ್ರೆಸ್ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಚಾಲನೆ ನೀಡಿದರು. ಆದರೆ ನಂತರ ಬಂದ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಶೀಘ್ರ ಕಾಮಗಾರಿ ಪೂರೈಸುವಂತೆ ಆಗ್ರಹಿಸಿದರು.
ಯಗಚಿ ಯೋಜನೆ ಎಂಜಿನಿಯರ್ ಪುಟ್ಟೇಗೌಡ ಮಾತನಾಡಿ, ವೀರಾಪುರದಿಂದ ಕೊಂಡಜ್ಜಿಯವರಗೆ ನಾಲೆ ನಿರ್ಮಾಣ ಮಾಡಬೇಕೆಂಬುದು ಯೋಜನೆಯಲ್ಲಿದ್ದು ಈಗಾಗಲೆ ನೆನೆಗುದಿಗೆ ಬಿದ್ದಿರುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಪ್ರಥಮ ಹಂತದ ಕೆಲಸ ಲಕ್ಷ್ಮೀಪುರದವರಗೆ ಮುಗಿದಿದ್ದು ಎರಡನೆ ಹಂತದ ಕೆಲಸ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸೀಗೆ ಬಸವರಾಜು, ಹಾಸನ ನಗರಸಭೆ ಸದಸ್ಯ ರಘು, ಜುಬೇರ್ ಅಹ್ಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement