ಯಗಚಿ ನೀರು ಸರಬರಾಜಿಗೆ ಅಡ್ಡಿಯಾದ ಅರಣ್ಯ ಭೂಮಿ ಪಡೆಯಲು ಚರ್ಚೆ
ಬೇಲೂರು: ಯಗಚಿ ಜಲಾಶಯದಿಂದ ಹಳೇಬೀಡು ಮತ್ತು ಮಾದಿಹಳ್ಳಿಗೆ ನೀರು ಕೊಡುವುದಕ್ಕೆ ಅಡ್ಡಿಯಾಗಿರುವ ಅರಣ್ಯ ಭೂಮಿ ಪಡೆಯುವ ಬಗ್ಗೆ ಇನ್ನು 15 ದಿನದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಅವರೊಂದಿಗೆ ತೆರಳಿ ಅರಣ್ಯ ಇಲಾಖೆ ಆಯುಕ್ತರ ಬಳಿ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹೇಳಿದರು.
ಯಗಚಿ ಜಲಾಶಯದಿಂದ ಹಳೇಬೀಡು, ಮಾದಿಹಳ್ಳಿ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಯ ಹಗರೆ, ಮಾದಿಹಳ್ಳಿ ಸಮೀಪದ ಕಾಲುವೆ ಕಾಮಗಾರಿ ವೀಕ್ಷಣೆ ನಡೆಸಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೆ ಶೇ. 90 ಭಾಗ ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂ ಅರಣ್ಯ ಭೂಮಿ ವಶಪಡಿಸಿಕೊಂಡು ನಾಲೆ ತೋಡುವುದಷ್ಟೆ ಬಾಕಿಯಿದೆ. ಈ ಸಂಬಂಧ ಇನ್ನು 15 ದಿನದಲ್ಲಿ ಭೂಮಿ ವಶಕ್ಕೆ ಪಡೆದು 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಮಾದಿಹಳ್ಳಿ ಬಳಿ ನಾಲೆ ಹಾದುಹೋಗಿರುವ ಸ್ಥಳದಲ್ಲಿನ ಭೂಮಿ ಮಾಲೀಕರು ಬೆಳೆ ಹಾನಿಯಾಗಿದೆ ಎಂದು ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಡಿಸಿ, ಕೆಲವೆ ದಿನದಲ್ಲಿ ರೈತರಿಗೆ ಬೆಳೆ ಪರಿಹಾರದ ಹಣ ಕೊಡಿಸಲಾಗುವುದು. ನಾಲೆಗೆ ಸ್ಥಳ ಬಿಟ್ಟುಕೊಟ್ಟಿರುವ ರೈತರಿಗೆ ಕಾಮಗಾರಿ ಪೂರ್ಣಗೊಂಡ ಬಳಿದ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ಈಗ ಪರೀಕ್ಷಾರ್ಥವಾಗಿ ಪಂಪ್ಹೌಸ್ನಿಂದ ನಾಲೆಯಲ್ಲಿ ನೀರು ಬಿಟ್ಟಿದ್ದು, ತಾಂತ್ರಿಕ ಕಾರಣದಿಂದ ನಿಲುಗಡೆ ಮಾಡಿದ್ದೆವು. ಇನ್ನು 3 ದಿನದಲ್ಲಿ ಪುನಃ ಕೆರೆಗಳಿಗೆ ನೀರು ಹರಿಸಲಾಗುವುದು. ಕಾಮಗಾರಿಯನ್ನ ಶೀಘ್ರ ಪೂರೈಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ವಿದ್ಯುತ್ ನಿಗಮಕ್ಕೆ ಶೀಘ್ರ ಹಣ ಪಾವತಿಸಲಾಗುವುದು ಎಂದರು.
ಯಗಚಿ ಯೋಜನೆ ಮುಖ್ಯ ಎಂಜಿನಿಯರ್ ಕೃಷ್ಣೇಗೌಡ, ಎಇಇ ಚಿಕ್ಕೇಗೌಡ, ರಾಜಶೇಖರ್, ತಹಸೀಲ್ದಾರ್ ಚೌಡಯ್ಯ, ರೈತ ಸಂಘದ ಶಿವಪ್ಪ, ಚನ್ನೇಗೌಡ, ಮಲ್ಲಿಕಾರ್ಜುನ, ವಲಯ ಅರಣ್ಯಾಧಿಕಾರಿ ಇತರರು ಇದ್ದರು.
ಹಳೇಬೀಡು ಮಾದಿಹಳ್ಳಿ ಏತ ನೀರಾವರಿ ಶೇ. 90 ಮುಗಿದಿದೆ. ತಾಂತ್ರಿಕ ಕಾರಣದಿಂದ ತಡವಾಗಿದೆ. ಶೀಘ್ರ ಪೂರ್ಣಗೊಳಿಸಲು ತಿಳಿಸಲಾಗಿದೆ.
- ವೈ.ಎನ್.ರುದ್ರೇಶಗೌಡ, ಶಾಸಕ
ಈ ಕಾಮಗಾರಿ 2 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ನೀಡುತ್ತಿರುವ ಭರವಸೆ ಬಗ್ಗೆ ನಮಗೆ ನಂಬಿಕೆಯಿಲ್ಲ. ನೀರು ಬಿಡುವುದನ್ನ ಕಾದು ನೋಡುತ್ತಿದ್ದು, ನಂತರ ರೈತರೆಲ್ಲರೂ ಸೇರಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ.
-ಗುರುಸ್ವಾಮಿಗೌಡ, ಅಧ್ಯಕ್ಷ, ಯಗಚಿ ನೀರಾವರಿ ಹೋರಾಟ ಸಮಿತಿ
ನಾಲೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಅನೇಕ ಭಾರಿ ಅಧಿಕಾರಿಗಳು, ಶಾಸಕರು ಬಂದು ಹೋಗಿದ್ದಾರೆ. ಬಂದಾಗಲೆಲ್ಲಾ 1 ತಿಂಗಳು, 2 ತಿಂಗಳು ಎಂದು ಸಬೂಬು ಹೇಳುತ್ತಲೇ ಸಾಗುತ್ತಿದ್ದಾರೆ.
-ಕೆ.ಪಿ.ಕುಮಾರ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ