ವಾಹನಕ್ಕೆ ಗ್ಯಾಸ್ ತುಂಬುವಾಗ ಆಕಸ್ಮಿಕ ಬೆಂಕಿ
ಹೊಳೆನರಸೀಪುರ: ವಾಹನಕ್ಕೆ ಅನಧಿಕೃತವಾಗಿ ಗ್ಯಾಸ್ ತುಂಬಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ ಮಾರುತಿ ವ್ಯಾನ್ ಸಂಪೂರ್ಣ ಭಸ್ಮವಾಗಿರುವ ಪ್ರಕರಣ ಪಟ್ಟಣದ ಕಂಚುಗಾರರ ಬೀದಿಯಲ್ಲಿ ಭಾನುವಾರ ನಡೆದಿದೆ. ಬೀದಿಯಲ್ಲಿಯೇ ರಾಜಾರೋಷವಾಗಿ ವ್ಯಾನ್ಗೆ ಗ್ಯಾಸ್ ತುಂಬುವ ವೇಳೆ ಉಂಟಾದ ಅಡಚಣೆಯಿಂದ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಅಕ್ಕ ಪಕ್ಕದ ಮನೆಯವರು ಗಾಬರಿಗೊಂಡು ಓಡಿದ್ದಾರೆ. ವ್ಯಾನಿನ ಬೆಂಕಿಯ ಕೆನ್ನಾಲಿಗೆ ಸಮೀಪದ ಮನೆಯ ಹೆಂಚುಗಳು ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸಮಯಕ್ಕೆ ಬರದಿದ್ದಲ್ಲಿ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸಿಡಿದು ಹೆಚ್ಚಿನ ಅನಾಹುತವಾಗುತ್ತಿತ್ತು. ವಾಹನಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬುವ ದಂಧೆ ಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ ಇಲ್ಲಿನ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.
ಸ್ವರ್ಣ ಪ್ರಾಶನದಿಂದ ಮಗುವಿನ ಆರೋಗ್ಯ ರಕ್ಷಣೆ
ಹಾಸನ: ಸ್ವರ್ಣಪ್ರಾಶನದಲ್ಲಿ ಪ್ರಮುಖ ಔಷಧ ಸ್ವರ್ಣ, ಸ್ವರ್ಣದ ಮೇಲೆ ಆಯುರ್ವೇದ ಮತ್ತು ಅನ್ಯ ವೈಧ್ಯಕೀಯ ಪದ್ದತಿಯಲ್ಲಿ ನಡೆದಿರುವ ಯಶಸ್ವಿ ಸಂಶೋಧನೆಗಳಲ್ಲಿ ಸ್ವರ್ಣದ ಪ್ರಾಮುಖ್ಯತೆ ಸಾಬೀತಾಗಿದೆ ಎಂದು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ರಾವ್ ತಿಳಿಸಿದ್ದಾರೆ. ಮಕ್ಕಳಲ್ಲಿ ಪದೇ ಪದೇ ಕಂಡುಬರುವ ಶ್ವಾಸಕೋಶದ ಸಮಸ್ಯೆಗಳಾದ ಶೀತ, ಕೆಮ್ಮು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಬ್ರಾಹಂ ಎಂಬುವವರು ನಡೆಸಿರುವ ಪ್ರಯೋಗದಲ್ಲಿ ಮೆದುಳಿನ ನರಗಳ ಶಕ್ತಿಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಅವರ ಮನೋದೈಹಿಕ ಬೆಳವಣಿಗೆ ಚೆನ್ನಾಗಿರಬೇಕು ಎಂಬುದು ಎಲ್ಲಾಯೀಷಕರ ಆಶಯ. ಇದಕ್ಕಾಗಿ ಹಿಂದಿನ ಕಾಲದಿಂದಲು ಅನೇಕ ವಿಧಿಗಳನ್ನು ಮಾಡುತ್ತಿದ್ದದ್ದು ವಾಡಿಕೆ. ಅದರಲ್ಲಿ ಸ್ವರ್ಣಪ್ರಾಶನವೂ ಕೂಡ ಒಂದು ಎಂದು ಹೇಳಿದ್ದಾರೆ.
ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಹಾಸನ: ಬೇಲೂರು ತಾಲೂಕಿನಲ್ಲಿ ನಾನಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪ್ರೋತ್ಸಾಹ ಧನವನ್ನು ವಿತರಿಸಲು ಅರ್ಹರು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ನಂತರ ಆನ್ ಲೈನ್ ಅರ್ಜಿ, ಜಾತಿ ಪ್ರಮಾಣ ಪತ್ರ, ಅಂಕಪಟ್ಟಿಗಳನ್ನು ಈ ಕಚೇರಿಗೆ ಸಲ್ಲಿಸಲು ಈ ಮೂಲಕ ತಿಳಿಯಪಡಿಸಿದೆ. ಅರ್ಜಿ ಸಲ್ಲಿಸುವ ಸಮಾಜ ಕಲ್ಯಾಣ ಇಲಾಖಾ ವೆಬ್ ಸೈಟ್ sw.kar.nic.in ಮಾಹಿತಿಗಾಗಿ ಬೇಲೂರು ತಾಲೂಕು ಸಮಾಜ ಕಲ್ಯಾಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ.
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಹಾಸನ: ತಾಪಂ ಸಭಾಂಗಣದಲ್ಲಿ ಜೂನ್ 2 ರಂದು ಮಧ್ಯಾಹ್ನ 12.30ಕ್ಕೆ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಹೊಳೆನರಸೀಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅಧ್ಯಕ್ಷತೆ ವಹಿಸುವರು. ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ತಮ್ಮ ಅಧೀನ ನೌಕರರನ್ನು ಸಭೆಗೆ ಹಾಜರಾಗುವಂತೆ ತಿಳಿಸದೆ ಖುದ್ದಾಗಿ ಸಕಾಲದಲ್ಲಿ ಸಭೆಗೆ ಹಾಜರಾಗಲು ಹಾಸನ ತಾಪಂ ಇಒ ತಿಳಿಸಿದ್ದಾರೆ.