ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಹಕರಿಗೆ ಸಕಾಲಕ್ಕೆ ಹಣ ನೀಡದ ಕಂಪನಿ: ಪ್ರತಿಭಟನೆ

Srinivasa Murthy VN
Updated On : 3 Jun 2014, 12:00 pm

ಹಾಸನ.:  ಹಾಸನದ ಅಗ್ರಿಗೋಲ್ಡ್ ಖಾಸಗಿ ಕಂಪನಿಯಲ್ಲಿ ಹಣ ತೊಡಗಿಸಿದ ಗ್ರಾಹಕರಿಗೆ ಸಕಾಲಕ್ಕೆ ಹಣ ನೀಡದೇ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ಪ್ರತಿಭಟನೆ ನಡೆಸಿದರು.
ಅಷ್ಟೋ ಇಷ್ಟೋ ಹಣ ಕ್ರೋಡೀಕರಣ ಮಾಡುವ ಆಸೆಯಿಂದ ಹಣ ತೊಡಗಿಸಿದ್ದೇವೆ. ಆದರೆ, ಆ ಹಣ ಮೆಚ್ಯೂರ್ ಆಗಿದ್ದರೂ, ಕಂಪನಿಯವರು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕಿಡಿ ಕಾರಿದರು. ನೂರಾರು ಗ್ರಾಹಕರಿಗೆ ಹೀಗೆ ಮಾಡಲಾಗಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಇದರಿಂದ ಎಲ್ಲಿ ನಾವು ಹೂಡಿರುವ ಹಣ ಇಲ್ಲವಾಗುತ್ತೋ ಅನ್ನೋ ಭಯ ಶುರುವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆದ್ರೆ ಈ ಆರೋಪವನ್ನು ಅಲ್ಲಗಳೆಯುವ ಕಂಪನಿಯವರು, ತೆಲಂಗಾಣ ವಿಭಜನೆ ಹಿನ್ನೆಲೆಯಲ್ಲಿ ವಿಜಯವಾಡದಿಂದ ಚಕ್ ಬರೋದು ವಿಳಂಬವಾಗಿದ್ದು, ಶೀಘ್ರವೇ ಹಣ ಪಾವತಿ ಮಾಡುತ್ತೇವೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರಾದ ತೇಜಸ್ವಿನಿ ಹಾಗೂ ಇತರರು ಇದ್ದರು.

ಸರ್ಕಾರಿ ಬಸ್‌ಗಳಿಂದ ವಾಯು ಮಾಲೀನ್ಯ
ಬೇಲೂರು: ವಾಯು ಮಾಲಿನ್ಯವನ್ನು ತಡೆಗಟ್ಟಬೇಕೆಂದು ಖಾಸಗಿ ವಾಹನಗಳ ಮಾಲೀಕರಿಗೆ  ದಂಡ ಹಾಕುವ ಸರ್ಕಾರ,  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ವಾಹನ ಹಾಗೂ  ಸರ್ಕಾರಿ ವಾಹನಗಳಿಗೇಕೆ ದಂಡ ಹಾಕುವುದಿಲ್ಲ.  ಸಾರ್ವಜನಿಕರಿಗೆ ಒಂದು ಕಾನೂನಾದರೆ ಸರ್ಕಾರಿ ವಾಹನಗಳಿಗೆ ಒಂದು ಕಾನೂನೇ ಎಂದು ಸಮಾಜ ಸೇವಕ ಕೆ.ಎಸ್. ತೀರ್ಥಪ್ಪ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರು ವಿಭಾಗದ ಸಕಲೇಶಪುರ ಡಿಪೋಗೆ ಸೇರಿದ ಕೆ.ಎ.18-ಎಫ್.334 ಬಸ್ಸು  ರಸ್ತೆಗಿಳಿದರೆ ಸಾಕು ರಸ್ತೆಯೆಲ್ಲ ಹೊಗೆಯಮಯವಾಗಿ ಬಸ್ಸಿನ ಹಿಂದೆ ಬರುವಂತಹ ವಾಹನಗಳಿಗೆ ಮುಂದಿನ ರಸ್ತೆಯೇ  ಕಾಣದಂತಾಗುತ್ತದೆ, ಬೇಲೂರಿನಿಂದ ಹಳೇಬೀಡು ಮಾರ್ಗದಲ್ಲಿ ಹೋಗುತ್ತಿರುವ ಸಂದರ್ಭ ಬೇಲೂರಿನ ನೆಹರು ನಗರ ಮತ್ತು ಬಂಟೇನಹಳ್ಳಿಯ  ಮಧ್ಯಭಾಗದಲ್ಲಿನ ನಾಲೆ ಸಮೀಪದಲ್ಲಿ ರಸ್ತೆ ಗುಂಡಿ ಬಿದ್ದಿದ್ದು ಈ ರಸ್ತೆ ಸಮೀಪ ಬಸ್  ಬರುತ್ತಿದ್ದಾಗ ಬಸ್ಸಿನ ಹಿಂದೆ ಬರುತ್ತಿದ್ದ ಬೈಕ್ ಸವಾರನಿಗೆ ರಸ್ತೆ ಕಾಣದೆ ಗುಂಡಿಗೆ ಬಿದ್ದು ತೀವ್ರ ಗಾಯಗೊಂಡಿದ್ದಾನೆ. ಇಂತಹ ಬಸ್ಸುಗಳನ್ನು ರಸ್ತೆಗೆ ಬಿಡದೆ  ಉತ್ತಮವಾದ ಬಸ್ಸುಗಳನ್ನು ಬಿಟ್ಟು ವಾಯು ಮಾಲಿನ್ಯ ತಡೆ ಗಟ್ಟುವುದರೊಂದಿಗೆ ಮುಂದೆ  ಆಗಬಹುದಾದ ಅವಘಡಗಳನ್ನು ತಪ್ಪಿಸಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕರು ರಸ್ತೆ ಗಿಳಿದು  ಪ್ರತಿಭಟಿಸ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

'ಫಾಗಿಂಗ್‌ನಿಂದ ಸೊಳ್ಳೆ ನಾಶವಾಗದು'
ಚನ್ನರಾಯಪಟ್ಟಣ: ಫಾಗಿಂಗ್‌ನಿಂದ ಸೊಳ್ಳೆಗಳ ನಾಶ ಅಸಾಧ್ಯ ಎಂದು ತಾಲೂಕು ಆರೋಗ್ಯ  ಅಧಿಕಾರಿ ಡಾ. ಜೆ. ಇ. ಶ್ರೀನಿವಾಸ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರ ಸಭೆಯಲ್ಲಿ ಮಾತನಾಡಿ, ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸೊಳ್ಳೆಗಳ ನಿಯಂತ್ರಣವಾಗುತ್ತದೆ. ಇಲಾಖಾ ಅಧಿಕಾರಿಗಳು, ಸಾರ್ವಜನಿಕರು ಲಾರ್ವ ಹಂತದಲ್ಲೇ ಸೊಳ್ಳೆಗಳ ನಿಯಂತ್ರಣ ಮಾಡುವುದು ಕ್ಷೇಮ ಲಾರ್ವ ನಿಯಂತ್ರಣಕ್ಕೆ ಟೆಮಿಪ್ರೋ ಎಂಬ  ಔಷಧ ಸಿಂಪಡಿಸಲಾಗುತ್ತದೆ ಎಂದರು. ಗ್ರೇಡ್ 2 ತಹಸೀಲ್ದಾರ್ ಸೋಮ ಶೇಖರ್ ಮಾತನಾಡಿ, ತಾಲೂಕಿನಲ್ಲಿ ಹಾಗೂ ಪಟ್ಟಣದಲ್ಲಿ ಸ್ವಚ್ಛತೆ ಕಡಿಮೆ ಯಾಗುತ್ತಿದೆ, ಮಾಂಸಾಹಾರಿ ಅಂಗಡಿಗಳಲ್ಲಿ ಗಲೀಜನ್ನು ಸೂಕ್ತ ಸ್ಥಳಕ್ಕೆ ಸಾಗಿಸುತ್ತಿಲ್ಲ. ಸ್ವಚ್ಛ ಇಲ್ಲದಿದ್ದರೆ ಕಾಯಿಲೆಗೆ ಆಹ್ವಾನ ನೀಡಿದಂತೆ. ನೀರಿನಿಂದ ಹೆಚ್ಚು ಸಾಂಕ್ರಾಮಿಕ ರೋಗಗಳು ಹರಡಲಿದ್ದು ಪುರಸಭೆ ವಿಶೇಷ ಗಮನ ಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಿಲ್ಪ ಶ್ರೀನಿವಾಸ್, ಡಾ.ಮಂಜುಳ, ಹಿರಿಯ ಪುರುಷ ಆರೋಗ್ಯ ಅಧಿಕಾರಿ ನಂಜೇಗೌಡ ಮುಂತಾದವರಿದ್ದರು.

ಹಲವೆಡೆ ವಿದ್ಯುತ್ ವ್ಯತ್ಯಯ ಇಂದು
ಹೊಳೆನರಸೀಪುರ: ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದ ತಂತಿ ಮಾರ್ಗ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.3ರ ಮಂಗಳವಾರ ಪಟ್ಟಣ ಹಾಗೂ ತಾಲೂಕಿನ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ವಿತರಣಾ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ನಿರ್ವಹಣಾ ಕಾರ್ಯದ ನಿಮಿತ್ತ ಮಂಗಳವಾರ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹೊಳೆನರಸೀಪುರ ಪಟ್ಟಣ, ಸೋಮನಹಳ್ಳಿ, ಹರದನಹಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿತರಣೆ ಆಗಲಿರುವ ಹೊಳೆನರಸೀಪುರ ಗ್ರಾಮಾಂತರ, ಮಲ್ಲಪ್ಪನಹಳ್ಳಿ, ಆಲಗೌಡನಹಳ್ಳಿ, ಪಡುವಲಹಿಪ್ಪೆ, ಕೆರಗೋಡು, ಸೋಮನಹಳ್ಳಿ, ನೇರಳೆ, ನಿಡುವಣಿ, ಕಾಳೇನಹಳ್ಳಿ, ಹರದನಹಳ್ಳಿ  ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಹನ ಡಿಕ್ಕಿ: ವ್ಯಕ್ತಿ ಸಾವು
ಕುಣಿಗಲ್: ಅಪರಿಚಿತ ವಾಹನ ಡಿಕ್ಕಿ ಹೊಡೆದು ಕಾರಣ ವ್ಯಕ್ತಿಯೊಬ್ಬ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಪಟ್ಟಣದ ರಾಹೆ ಹೆದ್ದಾರಿ 75ರ ಬೈಪಾಸ್ ರಸ್ತೆಯ ಹೇರೂರು ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ. ಚನ್ನರಾಯಪಟ್ಟಣ ತಾಲೂಕಿನ ದುದ್ದ ಗ್ರಾಮದ ತ್ಯಾಗರಾಜು (35) ಎಂದು ಗುರುತಿಸಲಾಗಿದೆ. ಈತ  ತನ್ನ ಸ್ನೇಹಿತನ ಜೊತೆ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳಿ ಸೋಮವಾರ ಬೆಳಗಿನ ಜಾವ ಹಿಂದಿರುಗುವಾಗ ಘಟನೆ ಸಂಭವಿಸಿದೆ. ಈತನೊಂದಿಗಿದ್ದ ಬೈಕ್ ಸವಾರ ನಾಪತ್ತೆಯಾಗಿದ್ದು, ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಗಜಿಣಗಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಮೈಸೂರು: ಕೇಂದ್ರ ಸಚಿವ ಸಂಪುಟದಲ್ಲಿ ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಡಾ.ಬಾಬು ಜಗಜೀವನರಾಮ್ ಚರ್ಮ ಕುಶಲ ಕಾರ್ಮಿಕರ ಸಂಘ ಆಗ್ರಹಿಸಿದೆ.
ಮಾದಿಗ ಸಮುದಾಯಕ್ಕೆ ಸೇರಿದ ರಮೇಶ್ ಜಿಗಜಿಣಗಿ ಅವರು ಹಲವು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂದು ಸಂಘದ ಅಧ್ಯಕ್ಷ ಟಿ.ನಾರಾಯಣ ಒತ್ತಾಯಿಸಿದ್ದಾರೆ.

ಒಡೆಯರ್  ಜಯಂತಿ
ಮೈಸೂರು: ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಲಿಯು ಜೂ.4ರ ಬೆಳಗ್ಗೆ 9ಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 130ನೇ ಜಯಂತಿ ಆಯೋಜಿಸಿದೆ. ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾ ಟಿಸುವರು ಎಂದು ಅರಸು ಮಂಡಲಿ ಅಧ್ಯಕ್ಷ ಎನ್.ಎಸ್. ದಾಸರಾಜೇ ಅರಸ್ (ಉದಯ್) ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement