ದುಶ್ಚಟಗಳಿಗೆ ಯುವಕರು ಬಲಿ: ಆತಂಕ
ಅರಸೀಕೆರೆ: ತಂಬಾಕು ಸೇವೆಯಂತಹ ದುಶ್ಚಟಗಳಿಂದಾಗಿ ಇಂದಿನ ಯುವಕರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆಲ್ಲದೆ ತಮ್ಮ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಪ್ರಧಾನ ನ್ಯಾಯಾಧೀಶ ದೇವಾನಂದ್ ಬೀಸರ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆ, ಆರೋಗ್ಯ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋದಿ ದಿನಾಚಾರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ ನಶ್ಯ, ಇನ್ನಿತರ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಶ್ವಾಸಕೋಶದ ಮೇಲೆ ಉಂಟಾಗುವ ಪರಿಣಾಮದಿಂದ ಉಸಿರಾಟದ ತೊಂದರೆ ಅಸ್ತಮ, ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಅಪಾರ ಸಿವಿಲ್ ನ್ಯಾಯಾಧೀಶ ಯಶವಂತಕುಮಾರ್ ಮಾತನಾಡಿ, ವರ್ಣರಂಜಿತ ಆಕರ್ಷಣೆಯ ಜಾಹೀರಾತುಗೆ ಬೆರಗಾಗಿ ಇಂದಿನ ನಮ್ಮ ಯುವ ಜನತೆ ತಂಬಾಕು, ಧೂಮಪಾನ ಹಾಗೂ ಇತರೆ ದುಷ್ಟಚಟಗಳಿಗೆ ಬಲಿಯಾಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಕ್ಷಣಿಕ ಆನಂದಕ್ಕಾಗಿ ತಮ್ಮ ಅರಿವಿಗೆ ಬಾರದೇ ಈ ದುಷ್ಟಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನ ಹಾಳುಮಾಡಿಕೊಳ್ಳುವ ಮೂಲಕ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಷಾದಿಸಿದರು.
ವಕೀಲ ಆರ್.ವಿಜಯಕುಮಾರ್ ಮಾತನಾಡಿ, ತಂಬಾಕು ಸೇವನೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರುವ ಮೂಲಕ ಆತನನ್ನ ಸಾವಿನ ಮನೆಯ ಬಾಗಿಲು ತಟ್ಟುವಂತೆ ಮಾಡುತ್ತದೆ. ಭಾರತ ದೇಶವೊಂದರಲ್ಲೇ ಪ್ರತಿವರ್ಷ 10 ಲಕ್ಷ ಜನ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದರೆ ವಿಶ್ವದಲ್ಲಿ ಪ್ರತಿವರ್ಷ 55 ಲಕ್ಷಕ್ಕೂ ಹೆಚ್ಚು ಜನ ಈ ದುಷ್ಟಚಟಗಳಿಗೆ ಬಲಿಯಾಗಿ ಅಸುನೀಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಟ ಪರಿಣಾಮ ಕುರಿತು ಜೆಸಿ.ಆಸ್ಪತ್ರೆಯ ಡಾ.ವಿಜಯಕುಮಾರ್ ಉಪನ್ಯಾಸ ನೀಡಿದರೆ. ವೇದಿಕೆಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸರ್ವೇಶ್, ಸರಕಾರಿ ಜೆಸಿ.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಕ್ರಪಾಣಿ, ಸಹಾಯಕ ಸರಕಾರಿ ವಕೀಲೆ ಮಮತಾ, ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್‌ಕುಮಾರ್, ಮೋಹನ್, ಎನ್.ಜಿ.ಮಧು, ಶಾಂತಲಾ ಮತ್ತಿತರು ಇದ್ದರು.